

ಶಿವಮೊಗ್ಗ: ಜೀವನದಲ್ಲಿ ರಾಜಕೀಯವಾಗಿ ನಾನು ಸೋತಿದ್ದೆ ಹೆಚ್ಚು. ಆದರೆ ನಾಯಕತ್ವದಲ್ಲಿ ಎಂದಿಗೂ ಸೋತಿಲ್ಲ, ಎದೆಗುಂದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾ ಸಂವಾದ ಮತ್ತು ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ, ತಂದೆ ಎಸ್.ಬಂಗಾರಪ್ಪ ಅವರಿಂದ ಕಲಿತ ನಾಯಕತ್ವದ ಗುಣಗಳನ್ನು ನಾನು ಮುಂದುವರಿಸಿಕೊಂಡು ಬಂದಿದ್ದೇನೆ ಎಂದರು.
ನಾಯಕನಾದವನು ಅಧಿಕಾರ ಸಿಕ್ಕಾಗ ಜನಪರ ಕಾರ್ಯಕ್ರಮಗಳನ್ನು ನೀಡಬೇಕು. ಮಾಜಿ ಸಿಎಂಗಳಾದ ದೇವರಾಜು ಅರಸು, ಎಸ್.ಬಂಗಾರಪ್ಪ ಹಾಗೂ ಹಾಲಿ ಸಿಎಂ ಸಿದ್ದರಾಮಯ್ಯ ಅನೇಕ ಜನಪರ ಯೋಜನೆಗಳ ಮೂಲಕ ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಮತ್ತು ಕೆಳಸ್ತರದ ಜನರ ಕಲ್ಯಾಣ ಮಾಡಿದ್ದಾರೆ ಎಂದರು.
ಜನಪರ ಆಂದೋಲನದ ಮಾಡಿಕೊಂಡು ಬಂದಿರುವ ಕಾರಣ ನನ್ನನ್ನೂ ಹೋರಾಟಗಾರನೆಂದು ಗುರುತಿಸುವಂತಾಗಿದೆ. ಅದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಕೂಡ ಕಳೆದ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ವಿವಿಧ ಅಧಿಕಾರ ನೀಡಿತ್ತು. ಈಗಲೂ ಸವಾಲಿನ ಖಾತೆಯನ್ನು ನೀಡಿದ್ದಾರೆ. ಅದನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದರು.