ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ. ಎಂಎಲ್ಸಿ ಮಾಡಿ, ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನ ಕೊಡಿ ಎಂದು ಯಾರನ್ನೂ ಕೇಳಿಲ್ಲ. ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ ಎಂದು ಮಾಜಿ ಎಂಎಲ್ಸಿ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಎಲ್ಸಿ ಆದರೆ ಏನೂ ಉಪಯೋಗವಿಲ್ಲ ಎಂಬುದು ನನ್ನ ಅನುಭವಕ್ಕೆ ಬಂದಿದೆ. ಅಂದೊಂದು ಗೌರವದ ಸ್ಥಾನ ಅಷ್ಟೇ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿಯೇ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ನಾನೇ ಕೊಡಿಸಿದ್ದೆ. ನಿಗಮದ ಅಧ್ಯಕ್ಷನಾಗಬೇಕೆಂಬ ಆಸೆ ನನಗಿಲ್ಲ ಎಂದರು.
ಜಾತಿ ಗಣತಿ ವರದಿಯನ್ನು ಸ್ವೀಕಾರ ಮಾಡಿ ಎಂದು ನಾನೇ ಮುಖ್ಯಮಂತ್ರಿಯವರಿಗೆ ಹೇಳಿದ್ದೆ. ಅವರು ಪುನಃ ಜಾತಿ ಗಣತಿ ಮಾಡುತ್ತಿದ್ದಾರೆ. 3 ತಿಂಗಳಲ್ಲಿ ವಸ್ತುಸ್ಥಿತಿ ತಿಳಿಯುವುದಿಲ್ಲವಾದರೂ ಒಮ್ಮೆ ಆಗಿ ಹೋಗಲಿ. ನಮ್ಮವರನ್ನು (ವಿಶ್ವಕರ್ಮ) ಜಾಗೃತಿ ಮಾಡುವ ಕೆಲಸ ಮಾಡುತ್ತಿದ್ದೇವೆ. ವಿಶ್ವಬ್ರಾಹ್ಮಣ ಎಂಬುದು ಜಾತಿ ಅಲ್ಲ, ಅದು ಒಳ ಪಂಗಡ. ಜಾತಿ ಗಣತಿಗೆ ಬಂದಾಗ ಜಾತಿ ಕಾಲಂನಲ್ಲಿ ವಿಶ್ವಕರ್ಮ ಎಂದೇ ಬರೆಯಿಸಿ ಎಂದು ನಮ್ಮವರಿಗೆ ತಿಳಿವಳಿಕೆ ನೀಡುತ್ತಿದ್ದೇವೆ. ಆದರೆ, ನಮ್ಮೊಳಗೆ ಇರುವ ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.