

ವಿಜಯಪುರ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಯತ್ನಾಳ ಮಾಡಿರುವ ಭ್ರಷ್ಟಾಚಾರದ ಆರೋಪ ಹುರುಳಿಲ್ಲದ್ದು ಎಂದಿರುವ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ಈ ಹಿಂದೆ ಯತ್ನಾಳ ತಮ್ಮದೇ ಪಕ್ಷದ ಸಿಎಂ ಮೇಲೆ ಮಾಡಿರುವ ಆಪಾದನೆಯ ವಿಡಿಯೋ ನನ್ನ ಬಳಿ ಇದೆ. ಬೇಕಾದರೆ ಬಿಡುಗಡೆ ಮಾಡಲಾ? ಎಂದು ಪ್ರಶ್ನಿಸಿದ್ದಾರೆ.
ಮುಂದಿನ ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದಿರುವ ಯತ್ನಾಳ ಹೇಳಿಕೆಗೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲರು, ರಾಜ್ಯದ ಜನ ಕಾಂಗ್ರೆಸ್ ಮೇಲೆ ನಂಬಿಕೆ ಇರಿಸಿ ಬಹುಮತ ನೀಡಿದ್ದಾರೆ. 136ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಹೀಗಾಗಿ ಸರ್ಕಾರ ಬೀಳಿಸುವುದು ಯತ್ನಾಳರ ಕೈಯಲ್ಲಿಲ್ಲ. ಇದೊಂದು ಬಾಲಶ ಹೇಳಿಕೆ ಎಂದರು.
ಈ ಹಿಂದೆ ಇದೇ ಯತ್ನಾಳರು ತಮ್ಮದೇ ಪಕ್ಷದ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ 10 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆಂದು ಆಪಾದಿಸಿದ್ದರು. ಆ ವಿಡಿಯೋ ಇನ್ನೂ ಇದೆ. ಬಿಡುಗಡೆ ಮಾಡಲು ಅದೇನು ರಹಸ್ಯ ವಿಷಯವೇನಲ್ಲ. ಬಹಿರಂಗವಾಗಿಯೇ ಹೇಳಿದ್ದು, ನಾಡಿನ ಜನತೆಗೆಲ್ಲ ಗೊತ್ತಿದೆ ಎಂದರು.
ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಬದಲಾವಣೆಗೆ ಸಂಬಂಧಿಸಿದಂತೆ ಮಾತನಾಡಿರುವ ಯತ್ನಾಳ ಈ ಹಿಂದಿನ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರನ್ನೇ ಮುಂದುವರಿಸಲು ಸಿಎಂಗೆ ಪತ್ರ ಬರೆದಿದ್ದರು. ಕಾರಣ ಈಗಿರುವ ಆಯುಕ್ತ ಸೌದಾಗರ ಲೋವರ್ ಕೇಡರ್ ಆಗಿದ್ದು, ಅರ್ಹರಲ್ಲ ಎಂದಿದ್ದರು. ಆದರೆ, ವಿಜಯಕುಮಾರ ಮೆಕ್ಕಳಕಿ ಕೂಡ ಲೋವರ್ ಕೇಡರ್ ಎಂಬುದು ಯತ್ನಾಳರಿಗೆ ಅರಿವಿರಬೇಕು. ಇಬ್ಬರೂ ಒಂದೇ ಕೇಡರ್ ಆಗಿದ್ದಾರೆ. ಬಹುಶಃ ಯತ್ನಾಳರಿಗೆ ಅವರಿಗೆ ಅರಿವು ಮರೆವು ಇರಬೇಕು ಎಂದು ಎಂ.ಬಿ. ಪಾಟೀಲ ಕಿಚಾಯಿಸಿದರು.