ಶಿಕ್ಷಕರ ಬಲ ನಂಬಿ ನಾನು ಸತತ ಗೆಲುವು ಕಂಡಿದ್ದೇನೆ

h1-horatti
Published on

ಹುಬ್ಬಳ್ಳಿ: ಇವತ್ತಿನ ಕಲುಷಿತ ರಾಜಕಾರಣದಲ್ಲಿ ಹಣಬಲ, ತೋಳ್ಬಲ, ಜಾತಿ ಬಲ ಹೊಂದಿದ್ದರೆ ಚುನಾವಣೆಯಲ್ಲಿ ಗೆಲವು ಸಾಧ್ಯವೆಂದು ನಂಬಿದವರೇ ಹೆಚ್ಚು. ಆದರೆ, ನಾನು ಶಿಕ್ಷಕರ ವಿಶ್ವಾಸ, ನಂಬಿಕೆ ಬಲವೊಂದನ್ನೇ ನಂಬಿದ್ದರಿಂದ ನನ್ನ ಸತತ ಗೆಲುವು ಸಾಧ್ಯವಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ವಿಧಾನ ಪರಿಷತ್ತಿನಲ್ಲಿ 45 ವರ್ಷ ಪೂರ್ಣಗೊಳಸಿದ ನಿಮಿತ್ತ ಗದಗ ಜಿಲ್ಲೆಯ ಬಸವರಾಜ ಹೊರಟ್ಟಿ ಹಿತೈಷಿ ಬಳಗದ ವತಿಯಿಂದ ನಗರದಲ್ಲಿ ಮಂಗಳವಾರ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಶಿಕ್ಷಕರೊಳಗೊಬ್ಬನಾದ ನನ್ನನ್ನು 8 ಬಾರಿ ಪರಿಷತ್ ಸದಸ್ಯನನ್ನಾಗಿ, 5 ಖಾತೆಗಳ ಸಚಿವನಾಗಿ, ಮೂರನೇ ಬಾರಿ ಸಭಾಪತಿಯಾಗಿ ಇಷ್ಟೊಂದು ಎತ್ತರಕ್ಕೆ ಬೆಳೆದು ಏನೆಲ್ಲ ಶ್ರೇಯಸ್ಸುಗಳನ್ನು ನಾನು ಕಂಡರೂ ಆ ಎಲ್ಲ ಕೀರ್ತಿ ಶಿಕ್ಷಕ ಸಮೂಹಕ್ಕೆ ಸಲ್ಲುತ್ತದೆ. ನಾನು ಎಷ್ಟು ಜನ್ಮವೆತ್ತರೂ ಶಿಕ್ಷಕರ ಋಣ ತೀರಿಸಲು ಸಾಧ್ಯವಿಲ್ಲ. 1980ರಿಂದ ಇಲ್ಲಿಯವರೆಗೆ ನನ್ನ ಬಳಿ ಸೋಲನ್ನು ಸುಳಿಯದಂತೆ ನೋಡಿಕೊಂಡವರು ಶಿಕ್ಷಕರು. ಅವರ ಪ್ರೀತಿ, ವಿಶ್ವಾಸ, ನಂಬುಗೆಗೆ ನಾನು ಚ್ಯುತಿ ಬರದಂತೆ ಪ್ರಾಮಾಣಿಕವಾಗಿ ಇಲ್ಲಿಯವರೆಗೆ ನಡೆದುಕೊಂಡು ಬಂದಿದ್ದೇನೆಂಬ ಆತ್ಮ ವಿಶ್ವಾಸವಿದೆ. ಶಿಕ್ಷಕರು ಮತ್ತು ನನ್ನ ನಡುವಿನ ಸಂಬಂಧ ಎಂತಹದ್ದು ಎಂದು ಅವರಿಗೆ ಮತ್ತು ನನಗೆ ಮಾತ್ರ ಗೊತ್ತು. ನಾನೊಬ್ಬ ಶಿಕ್ಷಕ ಬಂಧುಗಳಲ್ಲಿನ ಒಬ್ಬ ಸದಸ್ಯನಂತೆ ಅವರ ಜತೆ ಇದ್ದೇನೆ ಎಂದರು.

ಡಾ. ಬಸವರಾಜ ಧಾರವಾಡ ಹಾಗೂ ಎಸ್.ಎಂ. ಅಗಡಿ ಮಾತನಾಡಿದರು.

ಹೊರಟ್ಟಿಯವರ ಐದು ದಶಕಗಳ ಸಾರ್ವಜನಿಕ ಬದುಕಿನ ಕುರಿತು ಡಾ. ಬಸವರಾಜ ಧಾರವಾಡ ಸಂಪಾದಕತ್ವದಲ್ಲಿ ಅಪರೂಪದ ಚಿತ್ರವುಳ್ಳ ಹಾಗೂ ಹಲವಾರು ದಾಖಲೆಗಳನ್ನು ಸಂಗ್ರಹಿಸಿ ಹೊರತಂದ ಕಿರು ಹೊತ್ತಿಗೆಯನ್ನು ಬಸವರಾಜ ಹೊರಟ್ಟಿ ಅವರಿಗೆ ಅರ್ಪಿಸಲಾಯಿತು.

ಮುಖ್ಯೋಪಾಧ್ಯಾಯರಾದ ಎಂ.ಎಚ್. ಪೂಜಾರ, ಎಸ್.ಜಿ. ಕೊಲ್ಮಿ, ಉದ್ಯಮಿ ಪ್ರಭಾಕರ ವೆರ್ಣೇಕರ, ಯುವ ಉದ್ಯಮಿ ಸುನೀಲ ವೆರ್ಣೇಕರ, ಶಿಕ್ಷಕ ಸಂಘಟನೆಯ ರವಿ ಕೊಣ್ಣೂರ, ಸಂಗಪ್ಪ ಪಟ್ಟಣಶೆಟ್ಟಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net