

ರಾಯಚೂರು ನಾನು ಜಿಲ್ಲೆಯಲ್ಲಿ ಯಾವುದೇ ಭೂಮಿಯನ್ನು ಒತ್ತುವರಿ ಮಾಡಿಲ್ಲ .ಈ ಜನ್ಮದಲ್ಲಿ ತಪ್ಪು ಮಾಡಿಲ್ಲ, ಮುಂದೆ ಮಾಡುವುದಿಲ್ಲ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ನಗರದ ಸಚಿವ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ರಾಜ್ಯಪಾಲರಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ನಾನು ಜಮೀನಿನ ಕುರಿತು ಈ ಹಿಂದೆಯೇ ಜಿಲ್ಲಾಡಳಿತಕ್ಕೆ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ. ನಾನು ಭೂಮಿ ಖರೀದಿಸಿದ್ದು, 1988ರಲ್ಲಿ ಅಗ ನಾನು ಯಾವುದೇ ಹುದ್ದೆಯಲ್ಲಿರಲಿಲ್ಲ. ರಾಜ್ಯಪಾಲರು ಈಗ ಮತ್ತೆ ನೋಟಿಸ್ ನೀಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ಬಿಜೆಪಿಯವರು ಜನರನ್ನು ಮೂರ್ಖರು ಎಂದು ಭಾವಿಸಿದ್ದಾರೆ. ರಾಜ್ಯದ ಜನತೆಗೆ ಎಲ್ಲ ವಿಷಯಗಳ ಅರಿವಿದೆ. ಕೇಂದ್ರ ಏನೆಲ್ಲ ಬೆಲೆ ಏರಿಕೆ ಮಾಡಿದೆ ಎಂಬ ಬಗ್ಗೆ ಜನರಿಗೆ ವಿವರಿಸಿ ಹೇಳಬೇಕಿಲ್ಲ. ದೇಶದಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ ಗೆ 250 ರೂ. ಇಳಿಕೆಯಾದರೂ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಸಿಲಿಂಡರ್ ಬೆಲೆ ಹೆಚ್ಚಿಸಿದೆ. ಇದರಿಂದ ಪ್ರತಿ ತಿಂಗಳು ರಾಜ್ಯದ ಜನತೆಯ ಮೇಲೆ 5 ಸಾವಿರ ಕೋಟಿ ಹೊರೆಯಾಗುತ್ತಿದೆ.
ರಾಜ್ಯ ಸರ್ಕಾರ ಕೇಂದ್ರಕ್ಕೆ ಒಂದು ತೆರಿಗೆ ಕೊಟ್ಟರೆ ರಾಜ್ಯಕ್ಕೆ ಕೇವಲ 13 ಪೈಸೆ ಮರಳಿ ಬರುತ್ತಿದೆ. ಹಿಂದೆ ನರೇಂದ್ರ ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗ ಶೇ.50 ರಷ್ಟು ತೆರಿಗೆ ಹಣ ರಾಜ್ಯಗಳಿಗೆ ಮರಳಿ ಕೊಡಬೇಕು ಎಂದು ಒತ್ತಾಯಿಸಿದ್ದರು ಆದರೆ ಇವಾಗ ಯಾವುದೇ ಮಾತನಾಡುತ್ತಿಲ್ಲ ಎಂದು ಲೇವಡಿ ಮಾಡಿದರು.
ಅದರಿಂದ ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಮೇ.07 ರಂದು ನಗರದ ಜಿಲ್ಲಾ ಕ್ರೀಡಾಂಗದಲ್ಲಿ ಕಲ್ಯಾಣ ಕರ್ನಾಟಕ ವಿಭಾಗೀಯ ಮಟ್ಟದ ಸಮಾವೇಶ ಆಯೋಜಿಸಲಾಗಿದೆ.
ಪ್ರತಿಭಟನೆಗೆ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿ ಅನೇಕರು ಆಗಮಿಸಲಿದ್ದಾರೆ ಎಂದರು.