ನಾನು ಎಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ : ವಿ. ಶ್ರೀನಿವಾಸ ಪ್ರಸಾದ್

Srinivas Prasad
Published on

ಮೈಸೂರು: ಅಧಿಕಾರದ ಆಸೆಗೆ ನಾನು ಎಂದಿಗೂ ಹೊಂದಾಣಿಕೆ ರಾಜಕೀಯ ಮಾಡಲಿಲ್ಲ ಎಂಬ ಆತ್ಮಸಂತೃಪ್ತಿ ಇದೆ. ನನ್ನ ಐದು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಎಳ್ಳಷ್ಟು ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಹೇಳಿದರು.

ಕುವೆಂಪುನಗರದ ಗಾನಭಾರತೀ ವೀಣೆಶೇಷಣ್ಣ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೈದ್ಯ ಡಾ.ವಿ. ಲಕ್ಷೀನಾರಾಯಣ್ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾವುದೇ ವೃತ್ತಿಯಾದರೂ ಆ ವೃತ್ತಿಯ ಘನತೆ ಎತ್ತಿ ಹಿಡಿಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. 2024ರ ಮಾರ್ಚ್ 17ಕ್ಕೆ ನಾನು ರಾಜಕೀಯ ಪ್ರವೇಶಿಸಿ 50 ವರ್ಷಗಳು ಕಳೆಯುತ್ತದೆ. 9 ಲೋಕಸಭೆ, 5 ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಸೋತಾಗ ಕುಗ್ಗಿಲ್ಲ, ಗೆದ್ದಾಗ ಬೀಗಲಿಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಸಣ್ಣಕಪ್ಪು ಚುಕ್ಕೆ ಇಲ್ಲದ ರೀತಿಯಲ್ಲಿ ಕೆಲಸ ಮಾಡಿದ್ದೇನೆ ಎಂದರು.

ಪ್ರಸ್ತುತ ರಾಜಕೀಯ ಕ್ಷೇತ್ರವೆಂದರೆ ಮೂಗು ಮುರಿಯುವಂತಾಗಿದೆ. ಆದರೆ, ನಾನು ಎಂದಿಗೂ ಆ ರೀತಿಯಾಗಿ ನಡೆದುಕೊಂಡಿಲ್ಲ. ಯಾವುದೇ ಅಧಿಕಾರಕ್ಕೆ ಆಸೆ ಪಡಲಿಲ್ಲ. ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಕಾಲದಿಂದ ಇಲ್ಲಿಯವರೆಗೆ ಹಲವಾರು ಪ್ರಧಾನಮಂತ್ರಿಗಳನ್ನು ನೋಡಿದ್ದೇನೆ. ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಸಂಪುಟದಲ್ಲಿ ಕೆಲಸ ಮಾಡಿದ್ದೇನೆ. ಈ ಕಾರಣಕ್ಕೆ ಇಂದಿಗೂ ದಾರಿಯಲ್ಲಿ ಹೋಗುವಾಗ ಜನರು ನನ್ನತ್ತ ಬೊಟ್ಟು ಮಾಡುವುದಿಲ್ಲ. ಸಂಸದರ ಅವಧಿ ಮುಗಿದ ನಂತರ ಗೌರವದಿಂದ ರಾಜಕೀಯದಿಂದ ದೂರ ಉಳಿಯುತ್ತೇನೆ. ಕ್ಷೇತ್ರದ ಜನರು ನನ್ನೊಂದಿಗೆ ಸದಾ ಕಾಲ ಇರುತ್ತಾರೆ, ನಾನು ಎಂದಿಗೂ ಜನರನ್ನು ಮರೆಯುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net