

ಶಿವಮೊಗ್ಗ: ರಾಗಿಗುಡ್ಡದಲ್ಲಿ ಜನರನ್ನು ಭಯಭೀತರನ್ನಾಗಿಸುವ ಪ್ರಯತ್ನ ನಡೆದಿದೆ. ಇದೊಂದು ಪೂರ್ವನಿಯೋಜಿತ ಕೃತ್ಯ. ಹಿಂದುಗಳನ್ನು ಪ್ರಚೋದಿಸುವ ಪ್ರಯತ್ನ ಮಾಡಿದ್ದಾರೆ. ನಾನು ಸ್ಥಳೀಯರನ್ನು ಭೇಟಿಯಾಗಿ ಧೈರ್ಯ ತುಂಬಿದ್ದೇನೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಟಿಪ್ಪು, ಹೈದರಾಲಿ, ಔರಂಗಜೇಬ್ ಪೋಸ್ಟರ್ ಜತೆಗೆ ಪ್ರಚೋದನಕಾರಿ ಘೋಷಣೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಾರೆ. ಇಷ್ಟೆಲ್ಲ ಆದರೂ ಹಿಂದುಗಳು ಸಿಡಿಯಲಿಲ್ಲ ಎಂಬ ಕಾರಣಕ್ಕೆ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆದರೆ ಹಿಂದುಗಳ ಸಹನೆ ದೌರ್ಬಲ್ಯವಲ್ಲ ಎಂಬ ಅಂಶವನ್ನು ಕಲ್ಲು ತೂರಾಟ ನಡೆಸಿದವರು ಮನಗಾಣಬೇಕು ಎಂದು ಎಚ್ಚರಿಸಿದರು.
ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನೇಕ ನಿಬಂಧನೆಗಳ ಜತೆಗೆ ಪೊಲೀಸರಿಂದ ಅನುಮತಿ ಕಡ್ಡಾಯ. ಆದರೆ ಮುಸ್ಲಿಮರ ಮೆರವಣಿಗೆಯಲ್ಲಿ ಬಹಿರಂಗವಾಗಿ ತಲ್ವಾರ್ ಪ್ರದರ್ಶಿಸಲು ಯಾರ ಅನುಮತಿಯೂ ಬೇಡ. ಇದೆಂತಹ ವ್ಯವಸ್ಥೆ? ಯಾರನ್ನು ಮೆಚ್ಚಿಸಲು ಈ ವರ್ತನೆ? ಇದನ್ನೆಲ್ಲ ಪ್ರಶ್ನಿಸಿದರೆ ಕೋಮುವಾದಿಗಳೆಂಬ ಪಟ್ಟ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.