ನಾನು ಯಾವುದೇ ಹಲ್ಕಾ ಕೆಲಸ ಮಾಡಿಲ್ಲ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

mysore
Published on

ಮೈಸೂರು: ನಾನು ಯಾರಿಗೋ ಟೋಪಿ ಹಾಕಿ ಜಮೀನು ಪಡೆದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗಂಗೇನಹಳ್ಳಿಯಲ್ಲಿ ಬಹುಕೋಟಿ ಮೌಲ್ಯದ 1.11 ಎಕರೆ ಜಮೀನು ಡಿನೋಟಿಫಿಕೇಷನ್ ಮಾಡಲಾಗಿದೆ’ ಎಂದು ಸಚಿವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

ನಾನು ಎಲ್ಲಿಗೂ ಕದ್ದು ಓಡಿ ಹೋಗೋದಿಲ್ಲ. ನನ್ನ ರಕ್ಷಣೆ ಮಾಡಿ ಎಂದು ಯಾರ ಮುಂದೆಯೂ ಗೋಗರೆಯುವುದಿಲ್ಲ. ಆ ರೀತಿಯ ಕೆಲಸವನ್ನು ನಾನು ಮಾಡಿಲ್ಲ. ನಾನು ಯಾವುದೇ ಹಲ್ಕಾ ಕೆಲಸಗಳನ್ನು ಮಾಡಿಲ್ಲ. ಡಿನೋಟಿಫಿಕೇಷನ್ ಆಗಿದೆ. ಅದನ್ನು ನಾನು ಮಾಡಿದ್ದೇನಾ? ಆ ಜಮೀನು ತೆಗೆದುಕೊಂಡಿರುವುದು ನನ್ನ ಪತ್ನಿಯ ಅತ್ತೆ. ನನಗೂ ಅವರಿಗೆ ಸಂಬಂಧ ಇಲ್ಲ ಎಂದು ಸಿಎಂ ರೀತಿ ಹೇಳುವುದಿಲ್ಲ. ನನ್ನ ಉಳಿಸಿ ಎಂದು ಕೈಕಟ್ಟುವ ಪರಿಸ್ಥಿತಿ ಬಂದರೆ ನಾನು 5 ಸೆಕೆಂಡ್ ಕೂಡ ರಾಜಕಾರಣದಲ್ಲಿ ಇರುವುದಿಲ್ಲ ಎಂದೂ ಗುಡುಗಿದರು.


2015ರಲ್ಲೇ ಕೇಸ್ ಆಗಿತ್ತು. ಆ ನಂತರ ತನಿಖೆ ಮಾಡಿ ಬಿ ರಿಪೋರ್ಟ್ ಸಹ ಹಾಕಿದ್ದಾರೆ. ಈಗ ಅದಕ್ಕೆ ಮರು ಜೀವ ಕೊಡಲು ಪ್ರಯತ್ನಿಸುತ್ತಿದ್ದಾರೆ. ನಾನು ಯಾರಿಗೋ ಟೋಪಿ ಹಾಕಿ ಜಮೀನು ಪಡೆದಿಲ್ಲ. ನಾನೇ ಆ ಫೈಲನ್ನು ನನ್ನ ಅವಧಿಯಲ್ಲಿ ರಿಜೆಕ್ಟ್ ಮಾಡಿದ್ದೇನೆ.ನನಗೂ ಬಿ.ಎಸ್.ಯಡಿಯೂರಪ್ಪ ಅವರಿಗೂ ರಾಜಕೀಯ ಸಂಘರ್ಷ ಯಾವ ರೀತಿ ಇತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಆಗ ಅವರೇಕೆ ನನಗೆ ಸಹಾಯ ಮಾಡುತ್ತಾರೆ? ಎಂದು ಪ್ರಶ್ನಿಸಿದರು.


ಕಳೆದ ಮೂರು ತಿಂಗಳಿನಿಂದಲೂ ಈ ಸರ್ಕಾರ ನನ್ನ ವಿರುದ್ಧ ದಾಖಲೆ ಹುಡುಕಿಸುತ್ತಿದೆ. ಯಾವುದೂ ಸಿಗದ ಕಾರಣ ಹಳೇ ಕೇಸ್‌ಗೆ ಜೀವ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಕಿದರು.

ಮಿಸ್ಟರ್ ಕೃಷ್ಣಬೈರೇಗೌಡ ಯಾರನ್ನೋ ಮೆಚ್ಚಿಸಲು ಏನೇನೋ ಮಾತನಾಡಬೇಡಿ. ನೀನು ಏನು ಸತ್ಯ ಹರಿಶ್ಚಂದ್ರನಾ, ಕಂದಾಯ ಇಲಾಖೆಯಲ್ಲಿ ಏನೇನು ಮಾಡಿದ್ದೀಯಾ ಗೊತ್ತಿದೆ. ನೀವು ಏನೇ ಮಾಡಿದರೂ ನನ್ನದು ಏನೂ ಸಿಗುವುದಿಲ್ಲ. ಕೃಷ್ಣಬೈರೇಗೌಡ ಫಾರಿನ್‌ನಲ್ಲಿ ಓದಿದವನು, ಬಹಳ ಮೇಧಾವಿ ಎಂದುಕೊಂಡಿದ್ದೆ. ಆದರೆ, ಹೆಬ್ಬೆಟ್ಟು ಎಂದುಕೊಂಡಿರಲಿಲ್ಲ. ಯಾವನೋ ಏನೋ ಬರೆದು ಕೊಟ್ಟ, ಅದನ್ನು ಇವರು ತಂದು ಓದಿದ್ದಾರೆ ಎಂದು ಹರಿಹಾಯ್ದರು.


ಕಾಂಗ್ರೆಸ್ ಸಚಿವರ ಸುದ್ದಿಗೋಷ್ಠಿ ಕಾಂಗ್ರೆಸ್‌ನ ಟೂಲ್ ಕಿಟ್. ನಿನ್ನೆ ಯಾರೋ ಅವರಿಗೆ ಸರಿಯಾಗಿ ಸ್ಕ್ರಿಪ್ಟ್ ಕೂಡ ಬರೆದುಕೊಟ್ಟಿಲ್ಲ. ಅದರಲ್ಲೇ ಅವರು ಸಿಕ್ಕಿ ಬೀಳುತ್ತಾರೆ ಎಂದು ಜರಿದರು.

ಈಗ ಕೆಲವರಿಗೆ ಒಕ್ಕಲಿಗರ ಮೇಲೆ ಪ್ರೀತಿ ಹುಟ್ಟುತ್ತಿದೆ. ಮೈಸೂರಿನಲ್ಲಿ ದೇವೇಗೌಡರ ಫೋಟೊಗೆ ಚಪ್ಪಲಿ ಹಾರ ಹಾಕಿಸಿದ್ದು ಯಾರು? ಆಗ ಒಕ್ಕಲಿಗರ ಸ್ವಾಭಿಮಾನ ಎಲ್ಲಿಗೆ ಹೋಗಿತ್ತು? ನಮ್ಮ ಸಮಾಜದ ಸ್ವಾಮೀಜಿಗೆ ಸಾಫ್ಟ್ ಆಗಿ ಇರಲು ಹೇಳಿದ್ದೇನೆಂದು ಕೆಲವರು ಹೇಳಿದ್ದಾರೆ. ನಾನ್ಯಾಕೆ ಇಂತಹವೆಲ್ಲ ಮಾಡಲಿ ಹೇಳಿ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.


ಶಾಸಕ ಮುನಿರತ್ನ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಪ್ರಸ್ತಾಪ ವಿಚಾರದ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಎಸ್‌ಐಟಿ ಎನ್ನುವುದು ಸಿದ್ದರಾಮಯ್ಯ, ಶಿವಕುಮಾರ್ ತನಿಖಾ ಸಂಸ್ಥೆ ಇದ್ದಂತೆ. ಎಸ್‌ಐಟಿ ಅವರು ಮಾಡುವುದು ತನಿಖೆಯಲ್ಲ, ಅವರು ಮಾಡುವುದು ಇವರ ಗುಲಾಮಗಿರಿ. ಯಾವನೋ ಸುಬ್ರಹ್ಮಣೇಶ್ವರ ರಾವ್ ಅಂತೆ. ಅವನ ಮೂಲಕವೂ ಈಗ ನನ್ನ ವಿರುದ್ಧ ತನಿಖೆ ಮಾಡಿಸುತ್ತಾರಂತೆ. ನಾನು ಯಾರ ಮೇಲಿನ ಎಸ್‌ಐಟಿ ತನಿಖೆಯ ಬಗ್ಗೆಯೂ ಮಾತನಾಡುವುದಿಲ್ಲ. ಅದು ಹೇಗೆ ಕಾರ್ಯ ಮಾಡುತ್ತೇ ಎಂಬುದು ಜನರಿಗೆ ಗೊತ್ತಾಗಲಿ ಎಂದರು.

ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣದಲ್ಲಿ 2021ರಿಂದ ಲೋಕಾಯುಕ್ತ ತನಿಖೆ ನಡೆಸದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಸಂತೋಷ್ ಲಾಡ್ ಸೇರಿದಂತೆ ಇತರ ಸಚಿವರು ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ.

ಡಿನೋಟಿಫೈ ಪ್ರಕರಣದ ಜಮೀನು ಬಹಳ ಬೆಲೆ ಬಾಳುವಂತಹದ್ದಾಗಿದ್ದು, ಕುಮಾರಸ್ವಾಮಿ ಅವರು ತಮ್ಮ ಸಂಬಂಧಿಕರಿಗೆ ಡಿನೋಟಿಫೈ ಮಾಡಿದ್ದು ಜಿಪಿಎ ಆಗಿದೆ. ಅಧಿಕಾರಿಗಳು ಈ ಕ್ರಮ ಕಾನೂನಾತ್ಮಕವಲ್ಲವೆಂದರೂ ಈ ರೀತಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದು ಪರಿಶೀಲನೆ ನಡೆಸಲಾಗುವುದು ಎಂದರು.


ನಾವು ಯಾರ ಮೇಲೆಯೂ ಆರೋಪ ಹೊರಿಸುವ ಕೆಲಸವನ್ನು ಮಾಡಿಲ್ಲ. ಕುಮಾರಸ್ವಾಮಿ ಎಂದಿಗೂ ಹಿಟ್ ಆ್ಯಂಡ್ ರನ್ ಮಾಡುವವರಾಗಿದ್ದು, ಯಾವ ಆರೋಪಕ್ಕೂ ತಾರ್ಕಿಕ ಅಂತ್ಯ ಕಾಣಿಸುವುದಿಲ್ಲ. ಅವರು ಕೇಂದ್ರ ಸಚಿವರಾಗಿದ್ದು, ಜವಾಬ್ದಾರಿಯುತವಾಗಿ ವರ್ತಿಸಬೇಕು. ವಿಷಯದ ಸತ್ಯಾಸತ್ಯತೆಯನ್ನು ಅರಿತು ಮಾತನಾಡಬೇಕು ಎಂದು ಕುಟುಕಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net