ಕೆ.ಆರ್.ನಗರ: ನಾನು ಪರಿಶಿಷ್ಟ ಜಾತಿ ಮಹಿಳೆ ಎಂಬ ಕಾರಣಕ್ಕೆ ಪಂಚಾಯಿತಿ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಲ್ಲಿಯವರೆಗೂ ಪಂಚಾಯಿತಿ ಸದಸ್ಯ ಜಲೇಂದ್ರ ಕಿರುಕುಳ ನೀಡುತ್ತಿದ್ದಾರೆ ಎಂದು ಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಗಂಭೀರ ಆರೋಪ ಮಾಡಿದರು.
ಜಲೇಂದ್ರ ಅವರ ಬ್ಲಾಕ್‌ಮೇಲ್ ತಂತ್ರಕ್ಕೆ ಮಣಿಯದ ಕಾರಣ ನಮ್ಮಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದಸ್ಯ ಜಲೇಂದ್ರ ಅವರು ಉಪಾಧ್ಯಕ್ಷ ನಾಗೇಶ್ ಹಾಗೂ ಸದಸ್ಯ ನವೀನ್ ಅವರ ಜತೆಗೂಡಿ ಅಮೃತ ಯೋಜನೆಯಡಿಯಲ್ಲಿ ಟೆಂಡರ್ ಕರೆಯದೆ ಹಗರಣ ನಡೆದಿದೆ ಎಂಬ ಆರೋಪ ಸುಳ್ಳು. ಈ ಬಗ್ಗೆ ಟೆಂಡರ್ ಕರೆಯಲಾಗಿರುವ ಇ ಟೆಂಡರ್, ಅಮೃತ್ ಯೋಜನೆಯ ಬ್ಯಾಂಕ್ ಪಾಸ್ ಪುಸ್ತಕದ ದಾಖಲಾತಿ ಬಿಡುಗಡೆ ಮಾಡಿದ ಅಧ್ಯಕ್ಷೆ ಆಶಾ ಈ ಟೆಂಡರ್‌ಅನ್ನು ನಮ್ಮ ಕಡೆಯವರಿಗೆ ಕೊಡಿ, ಇಲ್ಲದಿದ್ದಲ್ಲಿ 3 ಲಕ್ಷ ರೂ. ಕೊಡಿ ಎಂದು ಬ್ಲಾಕ್‌ಮೇಲ್ ಮಾಡಿದ್ದಲ್ಲದೆ ಪರಿಶಿಷ್ಟ ಜಾತಿಯ ಶೋಷಿತ ಸಮಾಜದ ಮಹಿಳೆಯಾದ ನನಗೆ ಮತ್ತು ಪಿಡಿಒ ಅವರನ್ನು ಬೆದರಿಸಿದ್ದರು. ಇದಕ್ಕೆ ಅಂಜದಿದ್ದಾಗ ಈ ರೀತಿ ಆರೋಪ ಮಾಡಿದ್ದಾರೆ ಎಂದರು.
ಪಂಚಾಯಿತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಬಿಡುತಿಲ್ಲ. ಪಂಚಾಯಿತಿಯ ಯಾವುದೇ ಯೋಜನೆಯನ್ನು ಜಾರಿಗೆ ತಂದು ಅಭಿವೃದ್ಧಿ ಮಾಡಲು ಒಂದಲ್ಲ ಒಂದು ರೀತಿಯ ಕಿರುಕುಳ ನೀಡಿ ಕಾಮಗಾರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ದಲಿತ ಮುಖಂಡ ಸಿದ್ದಾಪುರ ಸತೀಶ್ ಮಾತನಾಡಿ, ದಲಿತ ಸಮುದಾಯದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಬೆರಳೆಣಿಕೆಯಷ್ಟಿದ್ದಾರೆ. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಅಡಿಯಲ್ಲಿ ಆಡಳಿತ ನಡೆಸಲು ಅವಕಾಶ ನೀಡಿದ್ದರೂ ಇಂತಹ ದಲಿತ ವಿರೋಧಿ ಮನಸ್ಸಿನವರು ನಮ್ಮ ಸಮುದಾಯದವರ ಅಧಿಕಾರ ಚಲಾಯಿಸಲು ತಡೆಯೊಡ್ಡುತ್ತಿದ್ದಾರೆ ಎಂದು ದೂರಿದರು.
ಹೆಬ್ಬಾಳು ಗ್ರಾಪಂ ಸದಸ್ಯರಾದ ಎಚ್.ಎಲ್.ಕಾಂತರಾಜು, ಎಚ್.ಎಸ್.ರವಿ, ದಲಿತ ಮುಖಂಡ ಬೀರ್ನಹಳ್ಳಿ ಸೋಮಶೇಖರ್ ಇದ್ದರು.