ದಿನಗಟ್ಟಲೇ ಕಾದರೂ ಸಿಗ್ತಿಲ್ಲ ಪಡಿತರ

asaaaa
Published on

ಹುಳಿಯಾರು: ಊಟ&ತಿಂಡಿ. ಕೆಲಸ&ಕಾರ್ಯ ಬಿಟ್ಟು ಇಡೀ ದಿನ ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯ ಈಗ ವಿವಿಧೆಡೆ ಸಾಮಾನ್ಯವಾಗಿ ಕಾಣಸಿಗುತ್ತಿವೆ. ಆದರೆ, ಈ ಸಾಲು ಯಾವುದೋ ದೇವರ ದರ್ಶನಕ್ಕೋ ಅಥವಾ ಊಟಕ್ಕೋ ಅಲ್ಲ. ಬದಲಾಗಿ ಪಡಿತರ ಪಡೆಯಲು.

ಹೌದು...ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರ್ವರ್​ ಸಮ್ಮಿಲನ ಪ್ರಕ್ರಿಯೆಯಲ್ಲಿನ ತಾಂತ್ರಿಕ ದೋಷದಿಂದ ಪಡಿತರ ಪಡೆಯಲು ಚಿಕ್ಕನಾಯಕನಹಳ್ಳಿ ತಾಲೂಕಿನ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾರ್ಡುದಾರರು ಊಟ&ತಿಂಡಿ, ಕೆಲಸ&ಕಾರ್ಯ ಬಿಟ್ಟು, ವಯಸ್ಸಿನ ಅಂತರವಿಲ್ಲದೆ ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

ಕಳೆದ ತಿಂಗಳು ಹೀಗೆ ಪರದಾಡಿದ ಲಾನುಭವಿಗಳು ಈ ತಿಂಗಳಾದರೂ ಸರಿಹೋಗಿರಬಹುದೆಂದು ಬಂದರೆ ಈ ಬಾರಿಯೂ ಪಡಿತರ ವಿತರಣಾ ಕೇಂದ್ರಗಳ ಮುಂದೆ ಕಾಯುವ ಅನಿವಾರ್ಯತೆ ಮುಂದುವರಿದಿದೆ.

ತಾಲೂಕಿನ ಎಲ್ಲ ಕೇಂದ್ರಗಳಲ್ಲಿಯೂ ಜನರು ಬೆಳಗ್ಗೆ 7 ಗಂಟೆಯಿಂದಲೇ ಪಡಿತರ ಪಡೆಯಲು ಬರುತ್ತಿದ್ದಾರೆ. ಬಹುತೇಕ ಬಿಪಿಎಲ್​ ಕಾರ್ಡ್​ದಾರರು ರೈತರು ಮತ್ತು ಕೂಲಿಕಾರ್ಮಿಕರಾಗಿದ್ದು, ದೈನಂದಿನ ಕೆಲಸಕಾರ್ಯ ಬಿಟ್ಟು ಎಡ್ಮೂರು ಕಿಮೀ ನಡೆದು ಬಂದು ನ್ಯಾಯಬೆಲೆ ಅಂಗಡಿಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಉದ್ಯೋಗ ಅರಸಿ ಮಕ್ಕಳು ಪಟ್ಟಣ ಸೇರಿರುವ ಮನೆಯಲ್ಲಿ ವೃದ್ಧರೇ ಬಂದು ಕ್ಯೂ ನಿಲ್ಲಬೇಕಿದೆ. ಇಲ್ಲವೇ ಮೊಮ್ಮಕ್ಕಳು ಶಾಲಾ&ಕಾಲೇಜು ಬಿಟ್ಟು ಕ್ಯೂ ನಿಲ್ಲುತ್ತಿದ್ದಾರಾದರೂ ಸರ್ವರ್​ ಸಮಸ್ಯೆ ಪರಿಹರಿಸುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ.

ಅದೃಷ್ಟ ಇದ್ದವರಿಗೆ ಪಡಿತರ

ದಿನಗಟ್ಟಲೇ ಕ್ಯೂ ನಿಂತರೂ ಅದೃಷ್ಟವಿದ್ದವರಿಗೆ ಬೆರಳಚ್ಚು ಬಂದು, ಪಡಿತರ ಸಿಗುತ್ತಿದೆ. ಇಲ್ಲವಾದರೆ ಕಾದುಕಾದು ಹೈರಾಣಾಗಿ ಮನೆಗೆ ಖಾಲಿ ಚೀಲದೊಂದಿಗೆ ಹಿಂದಿರುಗಬೇಕಿದೆ. ಇದುವರೆಗೆ ಮೊಬೈಲ್​ ಒಟಿಪಿ ಪಡೆದು ಪಡಿತರ ನೀಡುತ್ತಿದ್ದರು. ಆದರೆ ಕಳೆದೊಂದು ತಿಂಗಳಿಂದ ಬೆರಳಚ್ಚು ಮೂಲಕ ಪಡಿತರ ಪಡೆಯುವಂತೆ ಸೂಚಿಸಿದ್ದರಿಂದ ಬೆರಳಚ್ಚು ಪಡೆಯಲು ಸರ್ವರ್​ ಸಮಸ್ಯೆಯಾಗಿ ಕಾಡುತ್ತಿದೆ. ಗಂಟೆಗೆ ಐದಾರು ಮಂದಿ ಬೆರಳಚ್ಚು ಪಡೆಯುವಷ್ಟರಲ್ಲಿ ಸರ್ವರ್​ ಹೋಗುತ್ತದೆ. ಮತ್ತೆ ಸರ್ವರ್​ಗಾಗಿ ಕಾದು ಬಂದ ನಂತರ ಬೆರಳಚ್ಚು ಪಡೆಯಬೇಕಾಗಿರುವುದರಿಂದ ದಿನಕ್ಕೆ 30 ರಿಂದ 40 ಜನರಿಗಷ್ಟೇ ಪಡಿತರ ನೀಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ದೊರಕದ ಮುಕ್ತಿ

ಸೆಪ್ಟೆಂಬರ್​ ತನಕ ಎನ್​ಐಸಿ ಸರ್ವರ್​ ಮೂಲಕ ವಿತರಣೆ ಮಾಡಲಾಗುತ್ತಿತ್ತು. ಅಕ್ಟೋಬರ್​ನಿಂದ ಕೆಎಸ್​ಡಿಸಿ ಸರ್ವರ್​ ಮೂಲಕ ಪಡಿತರ ನೀಡಲು ಸರ್ಕಾರ ಕ್ರಮಕೈಗೊಂಡಿದ್ದು, ತಾಂತ್ರಿಕ ದೋಷ ಉಂಟಾಗಿದೆ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು. ಆರಂಭದಲ್ಲಿ ತೊಂದರೆ ಸಹಜ. ಆದರೆ ತಿಂಗಳು ಕಳೆದರೂ ಸಮಸ್ಯೆಗೆ ಮುಕ್ತಿ ಕೊಟ್ಟಿಲ್ಲ ಎಂದಾದರೆ ಆಡಳಿತ ಯಂತ್ರದ ಕಾರ್ಯವೈಖರಿ ಅಣಕಿಸುವಂತಿದೆ.

"ಸಮಸ್ಯೆಯಿಂದ ಬೆರಳಚ್ಚು ಪಡೆಯಲಾಗದೆ ಪಡಿತರ ವಿತರಣೆಗೆ ಸಮಸ್ಯೆಯಾಗಿದೆ. ಆಗೊಮ್ಮೆ ಈಗೊಮ್ಮ ಸರ್ವರ್​ ಸರಿಯಾದರೂ ಸರತಿಯಲ್ಲಿ ನಿಂತಿರುವ ಎಲ್ಲರಿಗೂ ರೇಷನ್​ ನೀಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಬರುತ್ತೆ, ಬರುತ್ತೆ ಎಂದಷ್ಟೇ ಹೇಳುತ್ತಾರೆ. ಜನರಿಂದ ನಾವು ಉಗಿಸಿಕೊಳ್ಳುತ್ತಿದ್ದೇವೆ."

> ರಾಮಣ್ಣ, ನ್ಯಾಯಬೆಲೆ ಅಂಗಡಿ ಮಾಲೀಕ, ಗೌಡಗೆರೆ

"3 ಕಿ.ಮೀನಿಂದ 200 ಜನ ಬರುತ್ತಿದ್ದೇವೆ

ಗೌಡಗೆರೆಗೆ ಪಡಿತರ ಪಡೆಯಲು 3 ಕಿಮೀ ದೂರದಿಂದ ನಿತ್ಯ 50ಕ್ಕೂ ಹೆಚ್ಚು ಮಂದಿ 3 ದಿನಗಳಿಂದ ಬರುತ್ತಿದ್ದೇವೆ. ಕಾದು ಕಾದು ಬರಿಗೈಯಲ್ಲಿ ಹಿಂದಿರುಗುತ್ತಿದ್ದೇವೆ. ನಾವೆಲ್ಲರೂ ಕೂಲಿಕಾರ್ಮಿಕರಾಗಿದ್ದು, ಅಕ್ಕಿಗೆ ಬಂದು ಕೆಲಸ ಕಳೆದುಕೊಳ್ಳುತ್ತಿದ್ದೇವೆ. ಇತ್ತ ಅಕ್ಕಿಯೂ ಇಲ್ಲ ಅತ್ತ ಕೆಲಸವೂ ಇಲ್ಲದಂತಾಗಿದೆ."

> ಹುಸೇನ್​ ಸಾಬ್​, ಕಾರ್ಡುದಾರ, ಕಂಪನಹಳ್ಳಿ

"ಈಗಾಗಲೇ ರಾಗಿ ಕೊಯ್ಲು ಆರಂಭವಾಗಿದ್ದು, ರೈತರು ಕೊಯ್ಲು ಮಾಡುವ ಜತೆಗೆ ಬೇರೆಯವರಿಗೆ ಕೂಲಿ ಹೋಗಿ ನಾಲ್ಕು ಕಾಸು ಮಾಡಿಕೊಳ್ಳುವ ಸಂದರ್ಭದಲ್ಲಿ ಅಕ್ಕಿಗಾಗಿ ಕೂಲಿ ಬಿಟ್ಟು ಸೊಸೈಟಿ ಮುಂದೆ ಸರತಿ ನಿಲ್ಲುವಂತಾಗಿದೆ."

> ರಾಜಣ್ಣ, ಕಾರ್ಡುದಾರ, ಕೆ.ಸಿ.ಪಾಳ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net