ದಮ್ಮು, ತಾಕತ್ತು ಸ್ವೀಕರಿಸಿ ಅಧ್ಯಕ್ಷನಾಗಿರುವೆ

Published on

ಬಳ್ಳಾರಿ : ರಾಬಕೊವಿ ಒಕ್ಕೂಟದ ಮಾಜಿ ಅಧ್ಯಕ್ಷರೊಬ್ಬರು ದಮ್ಮು, ತಾಕತ್ತು ಯಿದ್ದರೆ ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸು ಎಂಬುದಾಗಿ ಸವಾಲು ಹಾಕಿದ್ದರು ಎಂದು ಕೊಪ್ಪಳ ಶಾಸಕ, ಹಾಲಿ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ಹೇಳಿದರು.

ನಗರದ ರಾಬಕೊವಿ ಒಕ್ಕೂಟದ ಆಡಳಿತ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಅಧ್ಯಕ್ಷರ ಸವಾಲು ಸ್ವೀಕರಿಸಿ, ರಾಬಕೊವಿಯ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡು ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವೆ ಎಂದು ಮಾಜಿ ಅಧ್ಯಕ್ಷ ಭೀಮಾನಾಯ್ಕಗೆ ತೀರುಗೇಟು ನೀಡಿದರು.

ಕೆಎಂಎಫ್ ಅಧ್ಯಕ್ಷ ಸ್ಥಾನದ ಅಕಾಂಕ್ಷಿ ಸದ್ಯಕ್ಕೆ ನಾನಲ್ಲ. ರಾಬಕೊವಿ ಒಕ್ಕೂಟದಿಂದ ಕೆಎಂಎಫ್ ಗೆ ಡೆಲಿಗೇಷನ್ ಬಗ್ಗೆ ಯಾರಿಗೆ ನೀಡಬೇಕು ಎಂಬುದಾಗಿ ಇನ್ನೂ ಚರ್ಚೆಯಾಗಿಲ್ಲ, ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರ ವಿಶೇಷ ಆರ್ಶಿವಾದ ಹಾಗೂ ಸಚಿವರಾದ ಜಮೀರ್ ಅಹ್ಮದ್, ಕೆ.ಎನ್.ರಾಜಣ್ಣ, ಎಚ್.ಸಿ.ಮಹಾದೇವಪ್ಪ, ವೆಂಕಟೇಶ್ ಪಿರಿಯಾಪಟ್ಟಣ, ಶಾಸಕ ಬಿ.ನಾಗೇಂದ್ರ ಮತ್ತು ಒಕ್ಕೂಟದ ಎಲ್ಲ ನಿರ್ದೇಶಕರ ಬೆಂಬಲದಿಂದ ಅಧ್ಯಕ್ಷನಾಗಿರುವೆ, ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದರು.

ರಾಬಕೊವಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿ ಉನ್ನತ ಸ್ಥಾನಕ್ಕೆ ಬೆಳೆಯಲು ಸಹಕರಿಸುವೆ. ಅಲ್ಲದೆ, ಬಳ್ಳಾರಿಯಲ್ಲಿಯೇ ಮೆಗಾಡೇರಿ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ಒಕ್ಕೂಟದಲ್ಲಿ ಬಳ್ಳಾರಿಯಿಂದ ಎರಡು ನಿರ್ದೇಶಕರ ಸ್ಥಾನ ಕಲ್ಪಿಸಲು ಅಧಿಕಾರಿಗಳೊಂದಿಗೆ ಚರ್ಚಿಸುವೆ ಎಂದರು. ಸಂಸದ ರಾಜಶೇಖರ ಹಿಟ್ನಾಳ್, ಮಾಜಿ ಸಂಸದ ಕರಡಿ ಸಂಗಣ್ಣ, ಒಕ್ಕೂಟದ ಉಪಾಧ್ಯಕ್ಷ ಎನ್. ಸತ್ಯನಾರಾಯಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net