

ರಾಮನಗರ: ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕೆ ನಾವು ಕನಕಪುರದ ಮೂರು ಕಡೆಗಳಲ್ಲಿ ದೊಡ್ದಆಲಹಳ್ಳಿ ಕೆಂಪೇಗೌಡರ 25 ಎಕರೆ ಜಮೀನು ದಾನ ಮಾಡಿದ್ದೇವೆ. ದೇವೇಗೌಡರ ಕುಟುಂಬದವರು ಹಾಸನ, ರಾಮನಗರ, ಚನ್ನಪಟ್ಟಣದಲ್ಲಿ ಒಂದೇ ಒಂದು ಗುಂಟೆ ಜಾಗ ದಾನ ಮಾಡಿದ್ದಾರಾ? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಪ್ರಶ್ನಿಸಿದರು.
ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಪರವಾಗಿ ಶುಕ್ರವಾರ ಚಕ್ಕೆರೆ, ಹೊನ್ನನಾಯಕನಹಳ್ಳಿ ನಡೆಸಿದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.
“ದೇವೇಗೌಡರು ನಿನ್ನೆ ಚುನಾವಣೆ ಪ್ರಚಾರ ಮಾಡುತ್ತಾ ಡಿ.ಕೆ. ಸಹೋದರರು ಜಮೀನು ಕಬ್ಜ ಮಾಡಿಕೊಂಡಿದ್ದು, ಶಾಲೆ ಕಟ್ಟಲು ಜಾಗ ನೀಡುತ್ತಿಲ್ಲ. ಜಾಗ ಕೇಳಿದರೆ ದುಡ್ಡು, ದುಡ್ಡು ಅಂತಾರೆ ಎಂದು ಆರೋಪ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ನಿಮಗೆ ಕನಕಪುರದಲ್ಲಿ ಸಂಬಂಧಿಕರಿದ್ದರೆ ಕೇಳಿ ನೋಡಿ. ಹಳ್ಳಿಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂದು ಶಾಲೆಗಳ ನಿರ್ಮಾಣಕ್ಕೆ ನಾವು ಮೂರು ಕಡೆ ನಮ್ಮ ತಂದೆ ದೊಡ್ಡಆಲಹಳ್ಳಿ ಕೆಂಪೇಗೌಡರಿಗೆ ಸೇರಿದ 25 ಎಕರೆ ಜಾಗವನ್ನು ದಾನ ಮಾಡಿದ್ದೇವೆ. ಯಾರು ಬೇಕಾದರೂ ಹೋಗಿ ನೋಡಬಹುದು'' ಎಂದರು.
ಕುಮಾರಸ್ವಾಮಿ ಹಾಗೂ ದೇವೇಗೌಡರೇ, ನೀವು ಎಲ್ಲಾದರೂ ಒಂದು ಎಕರೆ ಜಾಗ ದಾನ ಮಾಡಿದ್ದೀರಾ? ನಾನು ನಿಮ್ಮ ಹಾಗೂ ನಿಮ್ಮ ಜಮೀನಿನ ವಿಚಾರಗಳನ್ನು ಈಗ ಮಾತನಾಡಲು ಹೋಗುವುದಿಲ್ಲ. ಚುನಾವಣೆಗಾಗಿ ನಿಮ್ಮನ್ನು ಟೀಕಿಸುವುದಿಲ್ಲ. ನಿಮ್ಮ ವಯಸ್ಸಿಗೆ ನಾನು ಗೌರವ ನೀಡುತ್ತೇನೆ. ಬಡವರಿಗೆ ಆಗಿರುವ ಮೋಸದ ಬಗ್ಗೆ ಧ್ವನಿ ಎತ್ತಲು ನಾನು ಈ ಪ್ರಶ್ನೆ ಕೇಳಬೇಕಾಗಿದೆ. ಹಾಸನ, ರಾಮನಗರ, ಚನ್ನಪಟ್ಟಣದಲ್ಲಿ ನೀವು ಹಾಗೂ ನಿಮ್ಮ ಕುಟುಂಬದವರು ಒಂದು ಗುಂಟೆ ಜಮೀನನ್ನು ನೀಡಿದ್ದೀರಾ? ಎಂದು ಮರು ಪ್ರಶ್ನಿಸಿದರು.
ನನ್ನ ಮೊಮ್ಮಗನ ಪಟ್ಟಾಭಿಷೇಕ ಮಾಡುವವರೆಗೂ ನಾನು ಬದುಕಿರುತ್ತೇನೆ ಎಂದು ದೇವೇಗೌಡರು ಹೇಳಿದ್ದಾರೆ. ಬಹಳ ಸಂತೋಷ, ನೀವು ನಿಮ್ಮ ಮೊಮ್ಮಗನ ಪಟ್ಟಾಭಿಷೇಕ ಮಾಡಿ. ಆದರೆ, ನಿಮಗಾಗಿ ದುಡಿದ ಕಾರ್ಯಕರ್ತರ ಪರಿಸ್ಥಿತಿ ಏನಾಗಬೇಕು ಎಂದು ನಿಮ್ಮನ್ನು ಕೇಳಲು ಬಯಸುತ್ತೇನೆ. ಕುಮಾರಸ್ವಾಮಿ ಕ್ಷೇತ್ರದ ಯಾವುದಾದರೂ ಒಬ್ಬ ಕಾರ್ಯಕರ್ತನಿಗೆ ಅಧಿಕಾರ ಕೊಟ್ಟಿದ್ದಾರಾ? ಇಲ್ಲ. ಈ ಕ್ಷೇತ್ರದ ಬಡವರನ್ನು ಮೇಲೆತ್ತಲು ನಾವಿದ್ದೇವೆ, ಯೋಗೇಶ್ವರ್ ಇದ್ದಾರೆ ಎಂದು ಹೇಳಿದರು.
ನಾನು ಈ ಕ್ಷೇತ್ರದಲ್ಲಿ ಉದ್ಯೋಗ ಮೇಳೆ ನಡೆಸಿದ ಬಳಿಕ, ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಉದ್ಯೋಗ ಮೇಳ ನಡೆಸಿದರು. ಅದೇ ಕೆಲಸವನ್ನು ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ ಯಾಕೆ ಮಾಡಲಿಲ್ಲ? ನಾವು ಕೈಗಾರಿಕೆ ಮಾಡಲು ಡಿ.ಕೆ. ಶಿವಕುಮಾರ್ ಜಮೀನು ನೀಡುತ್ತಿಲ್ಲ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಕೇಂದ್ರದ ಮಂತ್ರಿಯಾಗಿ ಕೇವಲ ಆರು ತಿಂಗಳಾಗಿದೆ. ಅವರು ಯಾವತ್ತೂ ಇಂತಹ ಕಡೆ ಕಾರ್ಖಾನೆ, ಕೈಗಾರಿಕೆ ಮಾಡುತ್ತೇವೆ ಎಂದು ಹೇಳಿಲ್ಲ. ಒಂದು ವೇಳೆ ಅವರು ಕೈಗಾರಿಕೆ, ಕಾರ್ಖಾನೆ ಮಾಡಲು ಅನುಮತಿ ನೀಡಿದರೆ, ಕೇತಗಾನಹಳ್ಳಿಯಲ್ಲಿ 200-300 ಎಕರೆ ಸೇರಿದಂತೆ ಇತರೆ ಕಡೆಗಳಲ್ಲಿ ಜಮೀನಿದ್ದು, ಅವುಗಳನ್ನು ನೀಡಲು ಸಿದ್ಧರಿದ್ದೇವೆ. ಬಡವರಿಗೆ ಅನುಕೂಲ ಮಾಡುವ ಕೆಲಸಕ್ಕೆ ನಾವು ಎಂದಿಗೂ ಬೇಡ ಎನ್ನುವುದಿಲ್ಲ ಎಂದರು.
ರಾಮನಗರದಲ್ಲಿ ಕುಮಾರಸ್ವಾಮಿ ಶಾಸಕರಾಗಿದ್ದರು, ಮುಖ್ಯಮಂತ್ರಿಯೂ ಆದರು. ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಕೂಡ ಶಾಸಕರಾಗಿದ್ದರು. ಆದರೂ ನಿಖಿಲ್ ರಾಮನಗರದಲ್ಲಿ ಯಾಕೆ ಸೋತರು? ಅವರು ಕೆಲಸ ಮಾಡಿದ್ದರೆ ಜನ ಸೋಲಿಸುತ್ತಿದ್ದರಾ? ಕೆಲಸ ಮಾಡಿ, ಜನರ ಸೇವೆ ಮಾಡಿದ್ದರೆ ಸೋಲುತ್ತಿರಲಿಲ್ಲ. 5 ವರ್ಷಕ್ಕೊಮ್ಮೆ ಬಂದು ಮತ ನೀಡಿ ಎಂದರೆ ಹೇಗೆ? ಮತದಾರರು ಏನು ಕೂಲಿಕಾರ್ಮಿಕರೇ? ಎಂದು ವಾಗ್ಧಾಳಿ ನಡೆಸಿದರು.
ಇಡೀ ಸರ್ಕಾರ ಯೋಗೇಶ್ವರ್ ಹಾಗೂ ನಿಮ್ಮ ಜತೆಗಿದೆ. ಈ ಅವಕಾಶವನ್ನು ನೀವು ಬಿಡುತ್ತೀರಾ? ಜೆಡಿಎಸ್ ನವರು ಅತ್ತರೆ ಅಳಲಿ, ಕುಣಿದರೆ ಕುಣಿಯಲಿ, ಏನಾದರೂ ಮಾಡಿಕೊಳ್ಳಲಿ. ನಿಮ್ಮ ಕಷ್ಟ ಸುಖಕ್ಕೆ ಆಗುವವರು ನಾವು, ನಿಮ್ಮ ಋಣ ತೀರಿಸುವವರು ನಾವು. ನಾವು ನಿಮ್ಮನ್ನು ಹಾಗೂ ಈ ಜಿಲ್ಲೆ ಬಿಟ್ಟು ಹೋಗುವುದಿಲ್ಲ. ನಿಮ್ಮ ಸೇವೆ ಮಾಡುತ್ತೇವೆ. ಹೀಗಾಗಿ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ, ಆಶೀರ್ವಾದ ಮಾಡಿ. ನಿಮ್ಮ ಜತೆಗೆ ನಾವು ನಿಂತು ನಿಮ್ಮ ಸೇವೆ ಮಾಡುತ್ತೇವೆ ಎಂದರು.