

ಮೈಸೂರು: ಶಾಸಕ ಸಾ.ರಾ.ಮಹೇಶ್‌ಗೆ ಎಲ್ಲ ಗೊತ್ತು. ಅವನಿಗಿರುವಷ್ಟು ಬುದ್ಧಿವಂತಿಕೆ ನನಗೆ ಇಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಕುಟುಕಿದರು.
ಮೈಮುಲ್ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ವಿಚಾರ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಜಿಟಿಡಿ, ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಅವರವರ ಕೆಲಸ ಮಾಡುವುದಕ್ಕೆ ನಾನು ಬಿಡುತ್ತೀನಿ. ಆದರೆ, ನಾನೇ ಎಲ್ಲವನ್ನೂ ಮಾಡಬೇಕು ಎಂಬುದು ಸಾರಾ ಮಹೇಶ್ ಬುದ್ಧಿ. ‘ಎಲ್ಲವೂ ನನಗೆ ಗೊತ್ತು. ಎಲ್ಲಿ ಏನು ಆಗಿದೆಯಂತಲೂ ಗೊತ್ತು’ ಎಂಬಂತೆ ವರ್ತಿಸುತ್ತಾನೆ. ಆದರೆ, ಸಾರಾ ಏನು ಕೆಲಸ ಮಾಡುತ್ತಾನೆ ಎಂಬುದು ಎಲ್ಲರಿಗೂ ಗೊತ್ತು ಎಂದು ತಿರುಗೇಟು ನೀಡಿದರು.
ಮೈಮುಲ್, ಡಿಸಿಸಿ ಬ್ಯಾಂಕ್ ಸ್ವಾಯತ್ತ ಸಂಸ್ಥೆಗಳು. ಆದರೆ, ನಿರ್ವಹಣೆ ಮಾಡುವುದು ಸರ್ಕಾರದ ಜವಾಬ್ದಾರಿ. ಎಲ್ಲವನ್ನೂ ನಾನು ಏಕೆ ಮಾಡಲಿ. ನನಗ ಮಾಡೋದಕ್ಕೆ ಬೇರೆ ಕೆಲಸ ಇಲ್ವಾ? ಎಲ್ಲ ವಿಚಾರದಲ್ಲೂ ಮೂಗು ತೂರಿಸುವುದಕ್ಕೆ ನಾನು ಸಾರಾ ಮಹೇಶ್ ಅಲ್ಲ ಎಂದು ಖಾರವಾಗಿ ಹೇಳಿದರು.
ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಮಂಡಳಿ ನೇಮಕ ವಿಚಾರವಾಗಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೆ. ಅದರಲ್ಲಿ ಏನು ವಿಶೇಷವಿಲ್ಲ ಎಂದರು.
ಗ್ರಾಪಂಗೆ ಆಡಳಿತಾಧಿಕಾರಿ ನೇಮಕ ಮಾಡುವುದಕ್ಕೆ ನನ್ನ ವಿರೋಧ ಇದೆ. ಗ್ರಾಮೀಣ ಭಾಗದಲ್ಲೂ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಗಾಂಧೀಜಿ ಕಂಡ ಸ್ವರಾಜ್ಯ ಕನಸಿಗೆ ಇದು ವಿರುದ್ಧವಾಗಿದೆ. ಜನಪ್ರತಿನಿಧಿಗಳು ಆಡಳಿತ ನಡೆಸಬೇಕು ಎನ್ನುವುದು ಅವರ ಕನಸು. ಹೀಗಾಗಿ, ಚುನಾವಣೆ ನಡೆಯುವವರೆಗೂ ಅವರನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.