

ಮೈಸೂರು: ವಕೀಲ ವೃತ್ತಿಯಲ್ಲಿ ನಾನು ಯಶಸ್ವಿಯಾಗಲಿಲ್ಲ. ಕಕ್ಷಿದಾರರ ವಿಶ್ವಾಸವನ್ನೂ ಗಳಿಸಲು ಸಹ ಆಗಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹಳೇ ದಿನಗಳನ್ನು ಸ್ಮರಿಸಿಕೊಂಡರು.
ದಟ್ಟಗಳ್ಳಿಯ ಖಾಸಗಿ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಹಿರಿಯ ವಕೀಲ ಎ.ಎಸ್.ನಟರಾಜ್ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ತಮ್ಮ ವಕೀಲ ವೃತ್ತಿಯ ಹಳೇ ದಿನಗಳನ್ನು ಮೆಲುಕು ಹಾಕಿದರು.
1972ರಲ್ಲಿ ಆಗಸ್ಟ್‌ನಲ್ಲಿ ವಕೀಲ ವೃತ್ತಿಗೆ ನಾನು ನೋಂದಣಿ ಮಾಡಿಕೊಂಡಿದ್ದೆ. ವಕೀಲ ಆಗುವುದಕ್ಕಿಂತ ಮುಂಚೆ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ. ರಾಜಕಾರಣ-ವಕೀಲ ವೃತ್ತಿಯನ್ನು ಒಟ್ಟಿಗೆ ಮಾಡಲು ಸಾಧ್ಯವಾಗಲಿಲ್ಲ. 1983ರಲ್ಲಿ ಶಾಸಕನಾಗಿ ಆಯ್ಕೆಯಾದ ಬಳಿಕ ಕೋರ್ಟ್‌ಗೆ ಹೋಗುವುದೂ ಕಡಿಮೆ ಆಯಿತು ಎಂದರು.
ಹಿರಿಯ ವಕೀಲರಾಗಿದ್ದ ಚಿಕ್ಕಬೋರಯ್ಯ ಅವರ ಬಳಿ ನಾನೂ ಕಿರಿಯ ವಕೀಲನಾಗಿದ್ದೆ. ‘ಒಂದು ರಾಜಕೀಯ ಮಾಡು ಅಥವಾ ವಕೀಲಗಿರಿ ಮಾಡು’ ಎಂದು ಅವರು ನನಗೆ ತಾಕೀತು ಮಾಡಿದ್ದರು. ಆದರೆ, ನಾನು ‘ಎರಡೂ ಮಾಡುತ್ತೇನೆ ಎಂದು ಹೇಳಿ ಎರಡು ಕ್ಷೇತ್ರದಲ್ಲೂ ಕೆಲಸ ಮಾಡಲು ಹೋದೆ. ರಾಜಕೀಯ ಕೈ ಹಿಡಿತು. ವಕೀಲ ವೃತ್ತಿ ಕೈ ಬಿಟ್ಟಿತು ಎಂದರು.
ಸಂಸತ್ ಚುನಾವಣೆಗೂ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದೆ. ಆಗ ನನ್ನನ್ನು ಕರೆದ ಚಿಕ್ಕಬೋರಯ್ಯ ಅವರು, ‘ನೀನು ಎಲೆಕ್ಷನ್‌ನಲ್ಲಿ ಬಹಳ ಕೆಟ್ಟದಾಗಿ ಸೋತಿದ್ದೀಯಾ. ವಿದ್ಯಾವರ್ಧಕ ಕಾನೂನು ಕಾಲೇಜಿಗೆ ಹೋಗಿ ಅತಿಥಿ ಉಪನ್ಯಾಸಕನಾಗಿ ಹೋಗಿ ಕೆಲಸ ಮಾಡು’ ಎಂದು ಸೂಚಿಸಿದ್ದರು. ಆ ಪ್ರಕಾರ 3 ವರ್ಷ ನಾನೂ ತಾತ್ಕಾಲಿಕ ಉಪನ್ಯಾಸಕನಾಗಿ ಕೆಲಸ ಮಾಡಿದ್ದೆ. ಶಾಸಕನಾಗಿ ಆಯ್ಕೆಯಾದ ಬಳಿಕ ಆ ಕೆಲಸವನ್ನೂ ಬಿಟ್ಟು ರಾಜಕೀಯದಲ್ಲೇ ಮುಂದುವರಿದೆ ಎಂದರು.
ವಕೀಲರು ಬೆಳಗ್ಗೆ-ಸಂಜೆ ತಮ್ಮ ಕಚೇರಿಗೆ ಹೋಗುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಕಕ್ಷಿದಾರರ ಕೈಗೆ ಸಿಗಬೇಕು. ಆಗಲೇ ವಿಶ್ವಾಸ ಮೂಡುತ್ತದೆ. ಆದರೆ, ನಾನು ಸರಿಯಾಗಿ ಕಚೇರಿಗೆ ಹೋಗಲಿಲ್ಲ. ಕಕ್ಷಿದಾರರ ಕೈಗೂ ಸಿಗುತ್ತಿರಲಿಲ್ಲ. ಹೀಗಾಗಿ, ಕಕ್ಷಿದಾರರ ವಿಶ್ವಾಸವನ್ನು ಕಳೆದುಕೊಳ್ಳಬೇಕಾಯಿತು. ಆದ್ದರಿಂದ ನಾನೂ ಒಳ್ಳೆಯ ವಕೀಲನಾಗಲು ಸಾಧ್ಯವಾಗಲಿಲ್ಲ ಎಂದು ಸಾರ್ವಜನಿಕರ ಎದುರು ಸ್ವಯಂ ವಿಶ್ಲೇಷಣೆ ಮಾಡಿಕೊಂಡರು.
ಈ ಹಿಂದೆ ವಕೀಲರಿಗೆ ಕೇಸ್ ನಡೆಸಲು ಕಕ್ಷಿದಾರರು ತಮ್ಮ ಊರುಗಳಿಂದ ಬೆಣ್ಣೆ-ತರಕಾರಿ ತಂದುಕೊಡುತ್ತಿದ್ದರು. ಆದರೀಗ ಕಷ್ಟ ಇದೆ. ಹಿಂದೆ ಬಹಳಷ್ಟು ಕಕ್ಷಿದಾರರು ಅವಿದ್ಯಾವಂತರಿದ್ದರು. ಅವರನ್ನು ದಾರಿ ತಪ್ಪಿಸಬಹುದಿತ್ತು. ಈಗ ಕಕ್ಷಿದಾರರು ಬುದ್ಧಿವಂತರು. ಆದ್ದರಿಂದ ಕಕ್ಷಿದಾರರಿಗೆ ನ್ಯಾಯ ಕಲ್ಪಿಸಿಕೊಡುವ ಕೆಲಸವನ್ನು ವಕೀಲರು ಮಾಡಬೇಕು. ಇದರಿಂದ ವೃತ್ತಿಗೆ ಹಿರಿಮೆ-ಗೌರವ ಬರುತ್ತದೆ ಎಂದರು.
ಸಮಾಜದ ಕುರಿತು ಅರಿವು, ಸಾಮಾನ್ಯ ಜ್ಞಾನ ಮತ್ತು ಜೀವನವನ್ನು ಅರಿತುಕೊಂಡವರು ಉತ್ತಮ ಮತ್ತು ಯಶಸ್ವಿ ವಕೀಲರಾಗಲು ಸಾಧ್ಯ ಎಂದರು
ಯಾವುದೇ ವೃತ್ತಿ ಆಗಲಿ. ಆಸಕ್ತಿ ವಹಿಸಿ ಕೆಲಸ ಮಾಡಿ. ಆ ವೃತ್ತಿಗೆ ಗೌರವ ತರುವ ಕೆಲಸವನ್ನು ಮಾಡಬೇಕು ಎಂದು ಸಭಿಕರಿಗೆ ಕಿವಿಮಾತು ಹೇಳಿದರು
ಎ.ಎಸ್.ನಟರಾಜ್‌ಗಿಂತ ನಾನು ಎರಡು ವರ್ಷ ಸೀನಿಯರ್. ಈತ ಸ್ನೇಹಮಯಿ. ಹಿರಿಯ-ಕಿರಿಯರೊಂದಿಗೆ ಪ್ರೀತಿ-ಅಭಿಮಾನದಿಂದ ಮಾತನಾಡಿಸುತ್ತಾನೆ. ಇಬ್ಬರು ಏಕವಚನದಲ್ಲಿ ಆತ್ಮೀಯವಾಗಿ ಮಾತನಾಡಿಕೊಳ್ಳುತ್ತೇವೆ. ನಾನೂ ವಕೀಲ ವೃತ್ತಿಯನ್ನು ಬಿಟ್ಟರೂ ಅವನ ಸ್ನೇಹವನ್ನು ಬಿಡಲಿಲ್ಲ. ಜತೆಗೆ, ಮತ್ತೊಬ್ಬ ವಕೀಲ ಶ್ರೀನಿವಾಸ್, ನಟರಾಜು ನನ್ನ ಕೇಸ್‌ಗಳನ್ನು ನೋಡಿಕೊಳ್ಳುತ್ತಿದ್ದರು. ಅವರಿಬ್ಬರು ನನ್ನ ವಕೀಲರು ಹೌದು. ಸ್ನೇಹಿತರು ಹೌದು ಎಂದರು.
ಹಿರಿಯ ವಕೀಲ ಎ.ಎಸ್.ನಟರಾಜ್ ಮತ್ತು ಸುನಿತಾ ನಟರಾಜ್ ಅವರನ್ನು ಕಿರಿಯ-ಕಿರಿಯ ವಕೀಲರು ಅಭಿನಂದಿಸಿದರು. ಹಿರಿಯ ವಕೀಲರಾದ ವೆಂಕಟರಾಜ್ ಅರಸ್, ಅಪ್ಪಾಜಿಗೌಡ, ಜಗದೀಶ್ ಇದ್ದರು
ಕಾರ್ಯಕ್ರಮದ ನಡುವೆಯೇ 4 ಸಲ ಮಹತ್ವ ದೂರವಾಣಿ ಕರೆಗಳು ಸಿಎಂಗೆ ಬಂದವು. ವೇದಿಕೆಯಲ್ಲಿ ಮಾತನಾಡುತ್ತಿದ್ದ ಇತರ ಗಣ್ಯರ ಭಾಷಣವನ್ನು ಸ್ಥಗಿತಗೊಳಿಸಿ ಸಿಎಂ ಅವರು ಗಂಭೀರವಾಗಿ ಮಾತನಾಡಿದರು.
ಹೀಗೆ ಅರ್ಧಗಂಟೆಯಲ್ಲಿ ನಾಲ್ಕು ಸಲ ಕರೆಗಳು ಬಂದವು. ಅದು ಯಾರ ಕರೆಗಳು ಎಂದು ಗೊತ್ತಾಗಲಿಲ್ಲ. ಬಳಿಕ ಸಿಎಂ ಇತರ ಭಾಷಣ ಆಲಿಸಿದರು. ಬಳಿಕ ಅರ್ಧಗಂಟೆ ಕಾಲ ಭಾಷಣ ಸಹ ಮಾಡಿದರು.