

ಮೈಸೂರು: ನನ್ನ ತಲೆಯಲ್ಲಿ ಬುದ್ಧಿ ಇಲ್ಲದೆ ಎನ್‌ಡಿಎ ಮೈತ್ರಿಕೂಟದೊಂದಿಗೆ ಹೋಗು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಗೆ ನಾನು ಹೇಳಿಲ್ಲ. ಈ ರಾಜ್ಯವನ್ನು ಕಾಂಗ್ರೆಸ್ ಲೂಟಿ ಮಾಡುತ್ತಿರುವುದನ್ನು ತಪ್ಪಿಸಲು ನೀನು ಮೋದಿ ಅವರೊಂದಿಗೆ ಹೋಗು ಎಂದು ನಾನೇ ಕುಮಾರಸ್ವಾಮಿ ಅವರನ್ನು ಕಳುಹಿಸಿಕೊಟ್ಟೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಎನ್‌ಡಿಎ ಮೈತ್ರಿಕೂಟ ಹಮ್ಮಿಕೊಂಡಿದ್ದ ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,
ರಾಜ್ಯ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಸಂಪತ್ತನ್ನು ಲೂಟಿ ಹೊರ ರಾಜ್ಯಗಳಿಗೆ ಕಳುಹಿಸಿ ದೇಶದಲ್ಲಿ ಬಿಜೆಪಿಯನ್ನು ಸೋಲಿಸುವ ಪ್ರಯತ್ನ ನಡೆಸುತ್ತಿದೆ. ಆದರೆ, ಕಾಂಗ್ರೆಸ್‌ನ ಈ ಪ್ರಯತ್ನ ಫಲಿಸುವುದಿಲ್ಲ. ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಯ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ನನ್ನ 64 ವರ್ಷ ರಾಜಕೀಯ ಜೀವನದಲ್ಲಿ ಇಂತಹ ಲೂಟಿ ಮಾಡುವ ಸರ್ಕಾರವನ್ನು ನೋಡಿಲ್ಲ. ರಾಜ್ಯದ ಸಂಪತ್ತು ಕಾಂಗ್ರೆಸ್ ದೋಚುತ್ತಿದೆ. ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‌ಗಢಕ್ಕೆ ರಾಜ್ಯದ ಜನರ ಸಂಪತ್ತನ್ನು ಲೂಟಿ ಮಾಡಿ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎರಡು ಮಹಾನುಭವರು (ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್) ರಾಜ್ಯವನ್ನು ಆಳುತ್ತಿದ್ದಾರೆ. ಆ ಪುಣ್ಯತ್ಮರಿಗೆ ನಮೋ ನಮಃ. ನರೇಂದ್ರ ಮೋದಿ ಅವರ ಬಗ್ಗೆ ಒಬ್ಬ ರಾಜ್ಯದ ಮುಖ್ಯಮಂತ್ರಿ(ಸಿದ್ದರಾಮಯ್ಯ), ಕೇವಲ 6 ಕೋಟಿ ಜನತೆಯ ಮುಖ್ಯಮಂತ್ರಿ 150 ಕೋಟಿ ಜನತೆಯ ಪ್ರಧಾನಿ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೆ ತೀವ್ರ ವಾಗ್ದಾಳಿ ನಡೆಸಿದರು.
ನಮಗೆ ಕೇವಲ ಮೂರು ಸೀಟು ಮುಖ್ಯವಲ್ಲ. ನಮಗೆ 28 ಕ್ಷೇತ್ರಗಳೂ ಮುಖ್ಯ. ಎಲ್ಲ ಕಡೆಗಳಲ್ಲೂ ಪ್ರಚಾರಕ್ಕೆ ಬರುತ್ತೇನೆ, ನೀವು ಕರೆದ ಕಡೆಗೆ ಬರುತ್ತೇನೆ. ನಾವು ಕನಿಷ್ಠ 24 ಕ್ಷೇತ್ರಗಳಲ್ಲಾದರೂ ಗೆಲುವು ಸಾಧಿಸಬೇಕು. ದೇಶವನ್ನು ಉಳಿಸಲು ಎನ್‌ಡಿಎ ಮೈತ್ರಿಕೂಟ 400 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಇದಕ್ಕೆ ರಾಜ್ಯದಿಂದ ಕೊಡುಗೆ ನೀಡಬೇಕು ಎಂದರು.