

ಶಿವಮೊಗ್ಗ: ಕೇವಲ ಎರಡೇ ನಿಮಿಷದಲ್ಲಿ ಬರೋಬ್ಬರಿ 10 ಮುಕ್ಕಾಲು ಇಡ್ಲಿ ಸ್ವಾಹ, ಹನ್ನೊಂದುವರೆ ಬಾಳೆಹಣ್ಣು ಗುಳಂ.., ಇಡ್ಲಿ ಖಾಲಿ ಆಗಿದೆ ಬೇಗ ತನ್ನಿ, ಸಾಂಬರ್ ಹಾಕಿ, ನೀರು ಕೊಡ್ರಾಪ್ಪ...
ಇದು ಶಿವಮೊಗ್ಗ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೋಮವಾರ ನಾಡಹಬ್ಬ ಶಿವಮೊಗ್ಗ ದಸರಾ ಮಹೋತ್ಸವದಲ್ಲಿ ಆಯೋಜನೆಗೊಂಡಿದ್ದ ಆಹಾರ ದಸರಾದಲ್ಲಿ ಕಂಡುಬಂದ ದೃಶ್ಯಗಳು.
ನಾಮುಂದು, ತಾಮುಂದು ಎಂದು ಬಾಳೆಹಣ್ಣುಗಳು, ಇಡ್ಲಿ ಮತ್ತು ಸಾಂಬರ್ ಅನ್ನು ಮೆಸ್ಕಾಂ ಇಲಾಖೆ ಮಹಿಳಾ ಮತ್ತು ಪುರುಷ ಸಿಬ್ಬಂದಿ ಹಾಗೂ ಸಾರ್ವಜನಿಕರು ಸ್ವಾಹ ಮಾಡಿದರು. ಇಡ್ಲಿ, ಬಾಳೆಹಣ್ಣು ತಿನ್ನುವುದನ್ನು ಕಂಡ ಸಾರ್ವಜನಿಕರು ಅಬ್ಬಾ ಇವರೇನು ಬಕಾಸುರರೇ ಎಂದು ಬಾಯಿಮೇಲೆ ಬೆರಳಿಟ್ಟು ನೋಡುತ್ತಿದ್ದ ದೃಶ್ಯ ಕಂಡುಬಂದಿತು. ಇಡ್ಲಿ ಹಾಗೂ ಬಾಳೆಹಣ್ಣು ತಿನ್ನುವ ಸ್ಪರ್ಧೆ ನೋಡುವುದಕ್ಕೆ ಸಾಕಷ್ಟು ಜನರು ಪಾಲ್ಗೊಂಡು ಆಹಾರ ದಸರಾ ಕಳೆ ಗಟ್ಟುವಂತೆ ಮಾಡಿದರು.
ಧನಲಕ್ಷ್ಮೀ, ಜಾನಕಿಗೆ ಪ್ರಥಮ ಸ್ಥಾನ:
ಆಹಾರ ದಸರಾದ ಬಾಳೆಹಣ್ಣು ತಿನ್ನುವ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಎನ್‌ಟಿ ರಸ್ತೆಯ ಧನಲಕ್ಷ್ಮೀ ವೆಂಕಟೇಶ್ ಪ್ರಥಮ ಸ್ಥಾನ ಪಡೆದರು. ಎರಡು ನಿಮಿಷದಲ್ಲಿ ಹನ್ನೊಂದುವರೆ ಬಾಳೆಹಣ್ಣುಗಳನ್ನು ಧನಲಕ್ಷ್ಮಿ ಗುಳಂ ಮಾಡಿದರು. ಧನಲಕ್ಷ್ಮಿ ವೆಂಕಟೇಶ್ ಅವರು ಕಳೆದ ವರ್ಷ 8 ಇಡ್ಲಿ ತಿಂದು ದ್ವಿತೀಯ ಸ್ಥಾನ ಪಡೆದಿದ್ದರು. ಅವರಿಗೆ ಪ್ರತಿಸ್ಪರ್ಧಿಯಾಗಿದ್ದ ಬಿ.ಜಿ.ಗೀತಾ ಎಂಬುವರು ಹತ್ತುವರೆ, ಚಂದ್ರಮ್ಮ ಗುಡ್ರುಕೊಪ್ಪ ಎಂಬುವರು ಒಂಬತುಕಾಲು ಹಣ್ಣು ತಿಂದು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಒಟ್ಟಾರೆ 15 ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮೆಸ್ಕಾಂ ಸಿಬ್ಬಂದಿಗಳಲ್ಲಿ ಜಾನಕಿ ಎಂಟು, ಪಿ.ವಿಶಾಲಾಕ್ಷಿ ಏಳುಕಾಲು, ಎಸ್.ಶೆಟ್ಟಮ್ಮ ಏಳು ಬಾಳೆ ಹಣ್ಣು ತಿಂದು ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು. ಮೆಸ್ಕಾಂ ವಿಭಾಗದಲ್ಲಿ 8 ಸಿಬ್ಬಂದಿ ಸ್ಪರ್ಧೆ ಮಾಡಿದ್ದರು.