ನಿಮ್ಮೊಂದಿಗೆ ನಾನಿದ್ದೇನೆ, ಧೈರ್ಯ ತಂದುಕೊಳ್ಳಿ

SVR BOMMAI
Published on

ಸವಣೂರ: ಯಲ್ಲಾಪುರ ಸಮೀಪ ಅರಬೈಲ್ ಘಟ್ಟ ಹತ್ತಿರ ಟ್ರಕ್ ಪಲ್ಟಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ಪಟ್ಟಣದ ಬೀದಿ ಬದಿ ವ್ಯಾಪಾರಿಗಳ ಮನೆಗೆ ಸಂಸದ ಬಸವರಾಜ ಬೊಮ್ಮಾಯಿ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮಂಗಳವಾರ ಪೇಟೆಯ ನಿವಾಸಿ ಫಯಾಜ್ ಜಮಖಂಡಿ ಮನೆಗೆ ಭೇಟಿ ನೀಡಿ, ‘ನಿಮ್ಮೊಂದಿಗೆ ನಾನಿದ್ದೇನೆ, ಧೈರ್ಯ ತಂದುಕೊಳ್ಳಿ’ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಬಡವರು. ದುಡಿಮೆಗೆ ಬೇರೆ ದಾರಿ ಇಲ್ಲದೆ ಊರೂರಿಗೆ ಹೋಗಿ ಸಂತೆ ವ್ಯಾಪಾರ ಮಾಡಿ ಅಲ್ಪಸ್ವಲ್ಪ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಪಟ್ಟಣದಲ್ಲಿ ಬಹುತೇಕರು ಸಣ್ಣಪುಟ್ಟ ವ್ಯಾಪಾರಕ್ಕಾಗಿ ಊರೂರು ಅಲೆಯುವುದನ್ನು ತಪ್ಪಿಸಲು ಕ್ಷೇತ್ರದಲ್ಲಿ ಬಡ ಕುಟುಂಬಗಳಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಬೀದಿಬದಿ ವ್ಯಾಪಾರಸ್ಥರು ಮನವಿ ಸಲ್ಲಿಸಿದರು.

ಶುಕ್ರವಾರ ಮತ್ತು ಶನಿವಾರ ರಾತ್ರಿ 9 ಗಂಟೆಗೆ ಸವಣೂರಿನಿಂದ ಖಾನಕೊಣ, ಗೋವಾಕ್ಕೆ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಖಾನಕೊಣ, ಕಾರವಾರ, ಬಂಕಾಪುರ, ಸವಣೂರಿಗೆ ಬರಲು ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮಹಿಳಾ ರಾಜ್ಯ ಕಾರ್ಯದರ್ಶಿ ಡಾ. ಶೋಭಾ ನಿಸ್ಸೀಮಗೌಡ್ರ, ಸವಣೂರ ಬಿಜೆಪಿ ಮಂಡಲ ಅಧ್ಯಕ್ಷ ಹನುಮಂತಗೌಡ ಮುದಿಗೌಡ್ರ, ನಿಂಗಪ್ಪ ಮರಗಪ್ಪನವರ, ಸಂಗಪ್ಪ ಯರೇಶೀಮಿ, ಚನ್ನಬಸಯ್ಯ ಪ್ರಭಯ್ಯನವರಮಠ, ಬಿ.ಎಸ್. ಕೊಪ್ಪದ, ಶ್ರೀಕಾಂತ ಲಕ್ಷೆ್ಮೕಶ್ವರ, ಶ್ರೀಪಾದಗೌಡ ಪಾಟೀಲ, ಧರಿಯಪ್ಪಗೌಡ ಪಾಟೀಲ, ಬಸವರಾಜ ಸವೂರ, ಭಾಷಾ ಗೋಳಸಂಗಿ, ಸುಲೇಮಾನ್ ಮುರಡಿ, ಅಬ್ದುಲಗನಿ ನದಾಫ, ಯೂನಿಸಖಾನ್ ಅಳ್ನಾವರ, ಇತರರಿದ್ದರು.

ಇದಕ್ಕೂ ಮುನ್ನ ಅಪಘಾತದಲ್ಲಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ, ಯೋಗಕ್ಷೇಮ ವಿಚಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net