ಕಾಂಗ್ರೆಸ್‌ನಲ್ಲಿ ನಾನೂ ಮೋಸ್ಟ್ ಸೀನಿಯರ್, ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ ? ಎಂದ ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ

APPAJI C S NADAGOUDA
ಅಪ್ಪಾಜಿ ಸಿ.ಎಸ್. ನಾಡಗೌಡ, ಶಾಸಕ
Published on

ವಿಜಯಪುರ: ಕಾಂಗ್ರೆಸ್‌ನಲ್ಲಿ ನಾನೂ ಮೋಸ್ಟ್ ಸೀನಿಯರ್, ಯಾವುದೇ ಕಪ್ಪು ಚುಕ್ಕೆ ಇಲ್ಲ, ಹಲವು ಬಾರಿ ಮಂತ್ರಿ ಸ್ಥಾನದ ಪಟ್ಟಿಯಲ್ಲಿ ಹೆಸರಿದ್ದರೂ ಕೈ ತಪ್ಪಿದೆ. ಹೀಗಾಗಿ ಈಗಲೂ ಅಪೇಕ್ಷೆ ಇದೆ. ಹಾಗಂತ ಯಾರದ್ದೋ ಸ್ಥಾನ ಕಸಿದುಕೊಳ್ಳಲ್ಲ ಎಂದು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ಅಧ್ಯಕ್ಷ, ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ ತಿಳಿಸಿದರು.

ಈ ಹಿಂದೆ ಮನೆಯಲ್ಲಿ ಮಲಗಿದ್ದಾಗಲೇ ಮಂತ್ರಿ ಸ್ಥಾನ ಹುಡುಕಿಕೊಂಡು ಬಂದಿದೆ. ನಾನು ಸಚಿವ ಸ್ಥಾನದ ನಿರೀಕ್ಷೆಯನ್ನೇ ಮಾಡಿರಲಿಲ್ಲ, ವಿಜಯಪುರದ ಮನೆಯೊಂದರಲ್ಲಿ ಚಹಾ ಕುಡಿಯುತ್ತಾ ಕುಳಿತಿದ್ದಾಗ ಆಕಸ್ಮಿಕವಾಗಿ ಕರೆ ಬಂದಿತ್ತು. ಅಂದಿನ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಕೆಂಪಯ್ಯ ಕ್ಯಾಬಿನೇಟ್ ಸೇರ್ಪಡೆಯ ವಿಷಯ ತಿಳಿಸಿದಾಗ ಅಚ್ಚರಿಯಾಗಿತ್ತು. ಹೀಗಾಗಿ ನಿರೀಕ್ಷೆ ಮಾಡದ ಹೊತ್ತಿನಲ್ಲಿಯೂ ನನಗೆ ಸಚಿವ ಸ್ಥಾನ ದೊರಕಿದಾಗ ಈಗ ನಿರೀಕ್ಷೆ ಮಾಡುವುದರಲ್ಲಿ ತಪ್ಪೇನು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.

ಒಳಮೀಸಲಾತಿ ಮಾದರಿ

ಮಂತ್ರಿ ಸ್ಥಾನ ಹಂಚಿಕೆಯಲ್ಲೂ ಒಳಮೀಸಲಾತಿಯ ಮಾದರಿ ಅನುಸರಿಸಲಾಗುತ್ತದೆ. ಲಿಂಗಾಯತದಲ್ಲೂ ಒಳಮೀಸಲಾತಿ ಮಾದರಿಯಲ್ಲಿ ಮಂತ್ರಿ ಸ್ಥಾನ ಹಂಚಿಕೆಯಾಗಲಿದ್ದು, ಆ ಕೋಟಾದಲ್ಲಿ ನನಗೂ ಮಂತ್ರಿ ಸ್ಥಾನ ಸಿಗಬಹುದಲ್ಲವೇ? ಜಿಲ್ಲೆಗೆ ಹೆಚ್ಚಿನ ಸ್ಥಾನ ಸಿಕ್ಕರೆ ಬೇಡ ಎನ್ನಲಾದೀತೆ? ಈ ಹಿಂದೆ ಅಖಂಡ ವಿಜಯಪುರ ಜಿಲ್ಲೆಯಲ್ಲಿ ನಾಲ್ವರು ಮಂತ್ರಿಗಳಿದ್ದರು. ಈಗಲೂ ಕೊಡಬಹುದಲ್ಲವೇ? ಅಪೇಕ್ಷೆ ಮಾಡಿದರೆ ಸಿಗುತ್ತಂತೆ ಅಲ್ಲ, ಅಪೇಕ್ಷೆ ಸಹಜ. ನನಗೂ ನಿರೀಕ್ಷೆ ಇದೆ. ಪಕ್ಷಕ್ಕಾಗಿ ದುಡಿದಿದ್ದೇನೆ. ಆ ಕಾರಣಕ್ಕಾಗಿ ಸಿಗುವ ನಿರೀಕ್ಷೆ ಇದೆ. ಆದರೆ, ಯಾರಿಗೂ ಹೋಗಿ ಕೇಳಿಲ್ಲ ಮತ್ತು ಯಾರಿಗೆ ಕೊಟ್ಟರೂ ಬೇಡ ಎಂದಿಲ್ಲ ಎಂದರು.

ಯಶವಂತರಾಯಗೌಡರು ಸಣ್ಣ ತಮ್ಮ ಇದ್ದಂತೆ

ಯಶವಂತರಾಯಗೌಡ ಪಾಟೀಲರು ನನ್ನ ಸಣ್ಣ ತಮ್ಮ ಇದ್ದಂತೆ. ಅವರಿಗೆ ಸಿಕ್ಕರೆ ಸಂತೋಷ. ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸುವೆ. ಜಿಲ್ಲೆಯಲ್ಲಿ ಪಕ್ಷದ ಆರು ಜನ ಶಾಸಕರಿದ್ದೇವೆ. ಎಲ್ಲರೂ ಹೋಗಿ ಹೈಕಮಾಂಡ್ ಹತ್ತಿರ ಹೋಗಿ ನೀವು ಯಾರಿಗೆ ಮಂತ್ರಿ ಮಾಡಿದರೂ ಸಂತೋಷ ಎಂದು ಹೇಳೋಣ. ನಿರ್ಧಾರ ಹೈಕಮಾಂಡ್‌ಗೆ ಬಿಡೋಣ. ಆದರೆ, ಒಬ್ಬರ ಅವಕಾಶದ ಬಗ್ಗೆ ಇನ್ನೊಬ್ಬರು ಮಾತನಾಡುವುದು ಬೇಡ. ನಾವು ಒಗ್ಗಟ್ಟಾಗಿರಬೇಕು. ಪರಸ್ಪರ ಹೊಂದಾಣಿಕೆ ಆಗಲೇಬೇಕೆಂದು ನಾಡಗೌಡ ಹೃದಯ ವೈಶಾಲ್ಯತೆ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net