

ಮೈಸೂರು: ಉಪಚುನಾವಣೆ ನಡೆಯಲಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುನರುಚ್ಚರಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚನ್ನಪಟ್ಟಣ ಚುನಾವಣೆಗೆ ನನ್ನ ಕುಟುಂಬದವರು ನಿಲುವುದಿಲ್ಲ. ಈ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ. ನನ್ನ ಹೆಸರೇ ಓಡುತ್ತಾ ಇರುವುದು ಎಂದು ಹೇಳಿದರು.
ಚನ್ನಪಟ್ಟಣದಲ್ಲಿ ನಾವು ವೇದಿಕೆಯನ್ನು ಸಜ್ಜು ಮಾಡಿಕೊಳ್ಳುತ್ತಾ ಇದ್ದೀವಿ. ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಹಿನ್ನಡೆ ಆಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಹಿನ್ನಡೆಯಾಗಿತ್ತು. ಈಗ ನಮ್ಮ ಬುನಾದಿಯನ್ನು ಭದ್ರ ಮಾಡ್ತಾ ಇದ್ದೀವಿ. ನಮ್ಮ ಕೆಲಸಕ್ಕೆ ಜನರು ನಮ್ಮ ಕೈ ಹಿಡಿಯುತ್ತಾರೆಂಬ ವಿಶ್ವಾಸ ಇದೆ ಎಂದು ತಿಳಿಸಿದರು.
ಜೆಡಿಎಸ್‌ನ ನಿಖಿಲ್ ಕುಮಾರ್‌ಸ್ವಾಮಿ ಸ್ಪರ್ಧೆಯ ಒತ್ತಾಯದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ, ಅವರ ಪಕ್ಷದಲ್ಲಿ ಯಾರನ್ನು ಬೇಕಾದರೂ ನಿಲ್ಲಿಸಿಕೊಳ್ಳಲಿ. ಅದು ಅವರಿಗೆ ಬಿಟ್ಟಿದ್ದು. ಅದರ ಬಗ್ಗೆ ಮಾತಾಡಲ್ಲ. ಚನ್ನಪಟ್ಟಣದಲ್ಲಿ ವ್ಯಕ್ತಿ ಮೇಲೆ ಚುನಾವಣೆ ನಡೆಯಲ್ಲ. ಪಕ್ಷದ ಸಿದ್ಧಾಂತದ ಮೇಲೆ ಚುನಾವಣೆ ಮಾಡಲು ನಾನು ಹೊರಟಿದ್ದೇನೆ. ಅಭ್ಯರ್ಥಿ ಜೆಡಿಎಸ್‌ನವರು ಆಗಲಿ, ಬಿಜೆಪಿಯವರೇ ಆಗಲಿ. ಆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ನಮ್ಮ ಮನೆಯನ್ನು ನಾವು ರಿಪೇರಿ ಮಾಡಿಕೊಂಡರೆ ಸಾಕು ಎಂದರು.
ಬಿಜೆಪಿಯವರು ಇನ್ನೂ 10 ವರ್ಷ ವಿರೋಧಪಕ್ಷವಾಗಿ ಇರುತ್ತದೆ. ಸಿಎಂ ರಾಜೀನಾಮೆ ಕೊಡುತ್ತಾರೆಂದು ಅವರು ಕಾಯುತ್ತಲೇ ಇರುತ್ತಾರೆ ಎಂದರು.