

* ಕಾರ್ಯಕರ್ತರ ಸಭೆಯಲ್ಲಿ ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಮಾಹಿತಿ
* ವರಿಷ್ಠರಿಂದ ಟಿಕೆಟ್ ಸಿಗುವ ವಿಶ್ವಾಸ
ರಾಮನಗರ
ಮೈತ್ರಿ ಅಭ್ಯರ್ಥಿಯಾಗಿ ನಾನೇ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಮೈತ್ರಿ ನಾಯಕರು ನನ್ನ ಹೆಸರನ್ನು ಅಂತಿಮಗೊಳಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಹೇಳಿದರು.
ಚನ್ನಪಟ್ಟಣದ ಖಾಸಗಿ ರೆಸಾರ್ಟ್ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಪಕ್ಷದ ವರಿಷ್ಠರ ಮೇಲೆ ವಿಶ್ವಾಸವಿದೆ. ನಾನು ಉಪಚುನಾವಣೆಯಲ್ಲಿ ಕಣದಲ್ಲಿರುತ್ತೇನೆ. ನಾನು ಎರಡೂ ಪಕ್ಷದ ನಾಯಕರೊಂದಿಗೆ ಚರ್ಚೆ ಮಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ಹೆಸರು ಘೋಷಣೆಯಾಗಲಿದೆ. ನಾನು ಹಿಂದೆ ಬಹಳ ಸಲ ಕುಮಾರಸ್ವಾಮಿ ಅವರ ಜತೆ ಮಾತನಾಡಿದ್ದೇನೆ. ನಮ್ಮ ರಾಜ್ಯ ನಾಯಕರು, ಕೇಂದ್ರ ನಾಯಕರ ಬಳಿಯೂ ಮಾತನಾಡಿದ್ದೇನೆ. ನನಗೆ ಟಿಕೆಟ್ ಸಿಕ್ಕೇ ಸಿಗುತ್ತೆ, ಈಗಾಗಲೇ ಸಾಕಷ್ಟು ಸರ್ವೇ ಆಗಿದೆ, ಎಲ್ಲ ಸರ್ವೇಯಲ್ಲೂ ನನ್ನ ಹೆಸರೇ ಬಂದಿದೆ. ಆದ್ಯತೆ ಮೇಲೆ ಕೊಟ್ಟರೂ ನನಗೇ ಟಿಕೆಟ್ ಕೊಡಬೇಕು ಎಂದು ಅಭಿಪ್ರಾಯಪಟ್ಟರು.
ಟಿಕೆಟ್ ಸಿಗದಿದ್ದರೆ ಮುಂದಿನ ನಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯೋಗೇಶ್ವರ್, ಇದಕ್ಕೆ ಈಗಲೇ ಏನೂ ಪ್ರತಿಕ್ರಿಯೆ ನೀಡಲ್ಲ. ಟಿಕೆಟ್ ಸಿಗದಿದ್ದರೆ ನಮ್ಮ ಕಾರ್ಯಕರ್ತರು ಏನು ಹೇಳುತ್ತಾರೋ ಅದರ ಮೇಲೆ ತೀಮಾರ್ನ ಆಗುತ್ತದೆ. ಆದರೆ, ನಾನು ದುಡುಕುವ ಅವಶ್ಯಕತೆ ಇಲ್ಲ. ಮೈತ್ರಿ ಅಭ್ಯರ್ಥಿ ನಾನೇ ಆಗುತ್ತೇನೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.
ಕುಮಾರಸ್ವಾಮಿ ಒಕ್ಕಲಿಗ ನಾಯಕರನ್ನು ತುಳಿಯುತ್ತಿದ್ದಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯೋಗೇಶ್ವರ್, ಆ ರೀತಿ ಏನೂ ಇಲ್ಲ, ಕಳೆದ 15 ವರ್ಷದಿಂದ ಇಲ್ಲಿ ನಾನು ಪಕ್ಷ ಕಟ್ಟಿದ್ದೇನೆ. ನಾನು ಇಲ್ಲಿ ಇರಲೇಬೇಕು, ನಾನಿದ್ದರೆ ಇಲ್ಲಿ ಬಿಜೆಪಿ ಬೆಳೆಯುವ ವಾತಾವರಣ ಬರುತ್ತದೆ. ನಾವು ಮೈತ್ರಿ ಆದಮೇಲೂ ಒಬ್ಬರ ಯೋಗಕ್ಷೇಮವನ್ನು ಒಬ್ಬರು ನೋಡಿಕೊಳ್ಳಬೇಕು. ಆ ಅರ್ಥದಲ್ಲಿ ನಾನು ಮಾತನಾಡಿದ್ದೇನೆ. ನನ್ನನ್ನು ಕುಮಾರಸ್ವಾಮಿ ತುಳಿಯುತ್ತಿಲ್ಲ ಎಂದರು.
ಟಿಕೆಟ್ ಸಿಗದಿದ್ದರೂ ಸಿಪಿವೈ ಸ್ಪರ್ಧೆ ಮಾಡುತ್ತಾರೆಂಬ ವಿಚಾರಕ್ಕೆ, ಇದರ ಬಗ್ಗೆ ನಾನು ಈಗಲೇ ಏನು ಹೇಳಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ನಾವು ಪಕ್ಷದ ಕೆಳಗೆ ಕೆಲಸ ಮಾಡ್ತಿದ್ದೇವೆ. ಪಕ್ಷ ಹೇಳಿದ ರೀತಿ ನಡೆದುಕೊಳ್ಳುತ್ತೇವೆ. ಮೈತ್ರಿ ಅಭ್ಯರ್ಥಿ ಯಾರೇ ಆದರೂ ಸಪೋರ್ಟ್ ಮಾಡಿ ಅಂತ ಪಕ್ಷ ಹೇಳಿದರೆ ಮಾಡಬೇಕಾಗುತ್ತದೆ. ಆದರೆ, ನಮ್ಮ ಕಾರ್ಯಕರ್ತರ ಅಭಿಪ್ರಾಯ ಕೇಳಬೇಕಾಗುತ್ತದೆ. ಪಕ್ಷದ ಕಾರ್ಯಕರ್ತನಾಗಿ ಪಕ್ಷದ ತೀಮಾರ್ನವನ್ನು ನಾನು ಬಕಪಕ್ಷಿ ರೀತಿ ಕಾಯುತ್ತಿದ್ದೇನೆ. ಪಕ್ಷ ನನ್ನ ಹೆಸರು ಅನೌನ್ಸ್ ಮಾಡಿದ ತಕ್ಷಣ ನಾಮಪತ್ರ ಸಲ್ಲಿಸುತ್ತೇನೆ. ನನ್ನ ಅಭಿಮಾನಿಗಳು ಸ್ವಾಭಿಮಾನಿ ಸೈನಿಕನ ಸ್ಪರ್ಧೆ ಖಚಿತ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಯಬೇಕು ಅಂದರೆ ನಾನು ಇರಬೇಕು. ಈ ಭಾಗದಲ್ಲಿ ಬಿಜೆಪಿಗೆ ನಾನೇ ಸೀನಿಯರ್. ನಾನು ಇರಬೇಕು ಎಂಬುದು ನನ್ನ ಬಯಕೆ, ಪಕ್ಷವೂ ಇದನ್ನೇ ಬಯಸುತ್ತದೆ. ಪಕ್ಷ ಅಷ್ಟುಬೇಗ ನಮ್ಮನ್ನು ಬಿಡಲ್ಲ.
ಕುಮಾರಸ್ವಾಮಿ ಪ್ರಜ್ಞಾವಂತರಿದ್ದಾರೆ. ಕಾದುನೋಡಿ, ಎಲ್ಲರನ್ನೂ ಸಮಾಧಾನ ಮಾಡಿ ನನಗೆ ಟಿಕೆಟ್ ಕೊಡುತ್ತಾರೆ. ಚಿಹ್ನೆ ಯಾವುದಾದರೂ ಇರಲಿ ಮುಂದೆ ನೋಡೊಣ ಎಂದರು.
ಅಭಯ ನೀಡಿದ ಸಿಪಿವೈ
ಚನ್ನಪಟ್ಟಣ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸಲಿದ್ದು, ಕಾರ್ಯಕರ್ತರು ಯಾರೂ ಆತಂಕಪಡುವ ಅಗತ್ಯವಿಲ್ಲ ಎನ್ನುವ ಅಭಯವನ್ನು ಕಾರ್ಯಕರ್ತರಿಗೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ಇನ್ನು ಒಂದೇ ಮೆಟ್ಟಿಲು ದೂರದಲ್ಲಿ ಇದ್ದಾರೆ. ಅವರಿಗೆ ರಾಜ್ಯದಲ್ಲಿ ಮಾಡಲು ಬಹಳ ಕೆಲಸವಿದೆ. ಮೇಕೆದಾಟು ಯೋಜನೆ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತರುವ ಕೆಲಸವಿದೆ. ಬೆಂಗಳೂರಿನ ಉಸ್ತುವಾರಿಯೂ ಅವರ ಮೇಲಿದೆ. ಇದರಿಂದಾಗಿ ಅವರು ಚನ್ನಪಟ್ಟಣ ಉಪಚುನಾವಣೆಯನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ತಾವೇ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದರೂ ಅವರು ಬರಲ್ಲ. ಇನ್ನು ಸುರೇಶ್ ಚನ್ನಪಟ್ಟಣಕ್ಕೆ ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಎಚ್ಡಿಕೆ ಮತ್ತೆ ಸಿಎಂ ಆಗಲಿ
ಕುಮಾರಸ್ವಾಮಿ ಈಗಾಗಲೇ ಎರಡು ಸಲ ಮುಖ್ಯಮಂತ್ರಿ ಆಗಿದ್ದಾರೆ. ಮೂರನೇ ಸಲ ಆದರೂ ನಾವು ಬೆಂಬಲ ಕೊಡೋಣ. ಈಗ ಕೇಂದ್ರ ಸಚಿವರಾಗಿ ಎನ್ಡಿಎ ಮೈತ್ರಿ ಫಲ ಉಣ್ಣುತ್ತಿದ್ದಾರೆ. ಅವರು ಮಾಡಬೇಕಾದ ಹಲವು ಕೆಲಸಗಳಿವೆ. ಅವರೂ ಈ ಚುನಾವಣೆ ಬಗ್ಗೆ ಅಷ್ಟು ಸುಲಭವಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ, ನಾನೇ ಎನ್.ಡಿ.ಎ ಅಭ್ಯರ್ಥಿ ಆಗುವೆ. ಬಿಜೆಪಿ- ಜೆಡಿಎಸ್ ಹಾಲುಸಕ್ಕರೆಯಂತೆ ಒಂದಾಗಿವೆ. ಲೋಕಸಭಾ ಚುನಾವಣೆಯಲ್ಲಿ ಅದು ಸಾಬೀತಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನವರು ನಮ್ಮ ಸಂಪರ್ಕದಲ್ಲಿದ್ದು, ನನ್ನನ್ನು ಎಂಎಲ್ಎ ಮಾಡುತ್ತೇವೆ ಎನ್ನುತ್ತಿದ್ದಾರೆ. ಒಂದೆರಡು ದಿನ ಕಾಯಿರಿ. ಆತಂಕ ಬೇಡ. ಎಲ್ಲ ಒಳ್ಳೆಯದಾಗಲಿದೆ ಎಂದರು.