ಮುಂದಿನ ಚುನಾವಣೆಗಳ ಜವಾಬ್ದಾರಿ ನನ್ನದೇ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಘೋಷಣೆ

14 bidadi photo 1
Published on

ಬಿಡದಿ: ಸ್ಥಳೀಯ ಸಂಸ್ಥೆ ಸೇರಿ ಮುಂದೆ ಎದುರಾಗುವ ಎಲ್ಲ ಚುನಾವಣೆಗಳಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ನಾನೇ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬಿಡದಿ ಹೋಬಳಿಯ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಬುಧವಾರ ನಡೆದ ರಾಮನಗರ ವಿಧಾನಸಭಾ ಕ್ಷೇತ್ರದ ಕೈಲಾಂಚ ಹೋಬಳಿಯ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕಳೆದ 15 ವರ್ಷಗಳಿಂದ ಸ್ಥಳೀಯ ಸಂಸ್ಥೆ ಮತ್ತು ನನ್ನ ಚುನಾವಣೆಯನ್ನು ಕಾರ್ಯಕರ್ತರೇ ನಡೆಸಿಕೊಂಡು ಬರುತ್ತಿದ್ದರು. ಆದರೆ ಕಳೆದ ತಾಪಂ ಮತ್ತು ಜಿಪಂನಿಂದ ಆಯ್ಕೆಯಾದ ನಮ್ಮ ಪಕ್ಷದ ಸದಸ್ಯರು ಅವಧಿ ನಿಗದಿ ಮಾಡಿಕೊಂಡು ಕಾಂಗ್ರೆಸ್ ಜತೆ ಕೈ ಜೋಡಿಸಿದ್ದಾರೆ. ಜಿಪಂ ಚುನಾವಣೆಯಲ್ಲಿ ನಡೆದ ಘಟನೆಗಳನ್ನು ಗಮನಿಸಿ ಗಂಭೀರ ಚಿಂತನೆ ನಡೆಸಿದ್ದು ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರದಲ್ಲೂ ಸ್ವತಃ ಜವಾಬ್ದಾರಿ ತೆಗೆದುಕೊಂಡು ಚುನಾವಣೆ ಎದುರಿಸಲು ತೀರ್ವನಿಸಿದ್ದೇನೆ ಎಂದರು.

ಚನ್ನಪಟ್ಟಣ ಮತ್ತು ರಾಮನಗರ ಕ್ಷೇತ್ರಗಳಲ್ಲಿ ಗೆದ್ದ ನಂತರ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಲಾಯಿತು. ನಂತರ ಕ್ಷೇತ್ರದ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆ ಹಾಗೂ ಮುಖಂಡರು, ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಲು ಸಾಧ್ಯವಾಗಿರಲಿಲ್ಲ. ನನ್ನನ್ನು ಬೆಳೆಸಿರುವ ಕಾರ್ಯಕರ್ತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸುತ್ತಿದ್ದೇನೆ ಎಂದು ಹೇಳಿದರು.

ರಾಮನಗರಕ್ಕೆ 35 ಕೋಟಿ ರೂ. ಅನುದಾನ: ಕರೊನಾ ಸಮಯದಲ್ಲಿ ಪ್ರವಾಸ ಮಾಡದಿದ್ದರೂ ರಾಮನಗರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ 35 ಕೋಟಿ ರೂ. ಅನುದಾನ ತರಲಾಗಿದೆ. ಸಮಸ್ಯೆ ಗಮನಕ್ಕೆ ಬಂದರೆ ತಕ್ಷಣ ಪರಿಹರಿಸಲಾಗುತ್ತಿದೆ. ನನ್ನ 12 ವರ್ಷಗಳ ಕನಸಾದ ರಾಜೀವ್​ಗಾಂಧಿ ವಿಶ್ವವಿದ್ಯಾಲಯದ ಬಗ್ಗೆ ಮಂಗಳವಾರ ಸಭೆ ನಡೆಸಿದ್ದು, 20 ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿದೆ. ಜತೆಗೆ ನನೆಗುದಿಗೆ ಬಿದ್ದಿರುವ ಕೆಲಸಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ. ರಾಜಣ್ಣ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಶ್ವತ್ಥ್, ತಾಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ಹಿರಿಯ ವಕೀಲ ಸುಬ್ಬಾಶಾಸ್ತ್ರಿ, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ತಾಲೂಕು ಜೆಡಿಎಸ್ ಅದ್ಯಕ್ಷ ರಾಜಶೇಖರ್, ಜೆಡಿಎಸ್ ರಾಜ್ಯ ವಕ್ತಾರ ಬಿ.ಉಮೇಶ್, ಗುತ್ತಿಗೆದಾರ ಪ್ರಕಾಶ್ ಇದ್ದರು.

ಅಭಿವೃದ್ದಿಯೇ ಮುಖ್ಯ

ಚನ್ನಪಟ್ಟಣ ಕ್ಷೇತ್ರಕ್ಕೆ ಪ್ರತಿನಿತ್ಯ ಬಂದು ಕಮಿಷನ್ ತೆಗೆದುಕೊಳ್ಳಲೋ ಅಥವಾ ಪೋಲೀಸರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಬರಲ್ಲ. ನಾನೇನಿದ್ದರೂ ಅಭಿವೃದ್ದಿ ಪರವಾಗಿರುವವನು. ಚುನಾವಣೆ ಬಂದಾಗ ಮಾತ್ರ ಪಕ್ಷ, ನಂತರ ಕ್ಷೇತ್ರದ ಜನರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕರು ಕ್ಷೇತ್ರಕ್ಕೆ ಬರುತ್ತಿಲ್ಲ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಎಚ್​ಡಿಕೆ ತಿರುಗೇಟು ನೀಡಿದರು.

ಕಾಂಗ್ರೆಸ್ ಬಾವುಟಕ್ಕೆ ಬೆಲೆಯಿಲ್ಲ

ರಾಜ್ಯದಲ್ಲಿ ಕಾಂಗ್ರೆಸ್ ಧ್ವಜಕ್ಕೆ ಬೆಲೆಯಿಲ್ಲದಂತಾಗಿದೆ. ಪಕ್ಷ ವಿಶ್ವಾಸ ಕಳೆದುಕೊಂಡಿದೆ ಎಂದು ಕಾಂಗ್ರೆಸ್ಸಿಗರೇ ಹಸಿರು ಶಾಲು ಹಾಕಿಕೊಂಡು ಮಂಡ್ಯದಲ್ಲಿ ಸಮಾವೇಶ ನಡೆಸಿದ್ದಾರೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಕುಟುಂಬಗಳಿಗೆ ಆರ್ಥಿಕ ನೆರವು ಕೊಟ್ಟಿದ್ದು ನಾನು. 20 ವರ್ಷದ ರಾಜಕಾರಣದಲ್ಲಿ ಬಡವರ ಬಗ್ಗೆ ಗಮನಹರಿಸದ ಕಾಂಗ್ರೆಸ್ಸಿಗರು ಈಗ ಜಾತಿ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದರು.

ಗೈರಾದ ಪ್ರಮುಖರು

ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ, ಕೈಲಾಂಚ ಜಿಲ್ಲಾ ಪಂಚಾಯಿತಿ ಜೆಡಿಎಸ್ ಸದಸ್ಯೆ ಪ್ರಭಾವತಿ, ಹುಣಸನಹಳ್ಳಿ ಕ್ಷೇತ್ರದ ತಾಪಂ ಸದಸ್ಯ ಎಚ್.ಎನ್.ಲಕ್ಷ್ಮಿಕಾಂತ್ ಅವರ ಗೈರು ಎದ್ದು ಕಾಣುತ್ತಿತ್ತು.

ಬೇರೆ ಪಕ್ಷದ ಮುಖಂಡರು ಆತ್ಮೀಯತೆ ತೋರಿಸಿ, ಕೆಟ್ಟ ಸಂದೇಶ ನೀಡುವ ಮೂಲಕ ಸ್ಲೋ ಪಾಯ್ಸನ್ ನೀಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಬಲಿಯಾಗುವುದು ಬೇಡ. ಯಾರ ಹಂಗಿಲ್ಲದೆ ನಿಷ್ಠಾವಂತ ಕಾರ್ಯಕರ್ತರಿಗಾಗಿ ಡಿಸೆಂಬರ್​ನಲ್ಲಿ ಎದುರಾಗುವ ಗ್ರಾಪಂ ಚುನಾವಣೆಯನ್ನು ನಾನೇ ಮುಂದು ನಿಂತು ಎದುರಿಸುತ್ತೇನೆ. | ಎಚ್.ಡಿ. ಕುಮಾರಸ್ವಾಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net