ನಾನು ಕನ್ನಡಿಗ ಎನ್ನುವುದೇ ಹೆಮ್ಮೆ

3 ಎಸ್ಕೆಪಿ 1b
ಕಸಾಪ ಅಂಜನಾಪುರ ಹೋಬಳಿ ಘಟಕದ ಚಟುವಟಿಕೆಗಳಿಗೆ ಡಿ.ಮಂಜುನಾಥ್ ಉದ್ಘಾಟಿಸಿದರು. ಕೆ.ಎಸ್.ಹುಚ್ರಾಯಪ್ಪ, ಎಚ್.ಎಸ್.ರಘು, ಪ್ರವೀಣ್ ಮಹಿಷಿ, ಚನ್ನೇಶ್, ಕಾಳೇಶಪ್ಪ. ಕಲ್ಮನೆ ಸುರೇಶ್, ಸುನಿಲ್ಕುಮಾರ್ ಇತರರಿದ್ದರು.
Published on

ಶಿಕಾರಿಪುರ: ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿಯ ಉಳಿವಿಗೆ ನಾವು ಮುಂದಾಗಬೇಕು. ಕನ್ನಡ ಹಿರಿಮೆ, ನಾನು ಕನ್ನಡಿಗ ಎನ್ನುವುದೇ ಅಭಿಮಾನದ ಸಂಗತಿ. ಬೇರೆ ಭಾಷೆಗಳನ್ನು ಪ್ರೀತಿಸೋಣ. ಆದರೆ ಕನ್ನಡವನ್ನು ನಿತ್ಯವೂ ಆರಾಧಿಸೋಣ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಈಸೂರು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಂಜನಾಪುರ ಹೋಬಳಿ ಘಟಕದ ಚಟುವಟಿಕೆಗಳಿಗೆ ಚಾಲನಿ ನೀಡಿ ಮಾತನಾಡಿ, ಕನ್ನಡವೆಂದರೆ ನಮ್ಮ ತಾಯಿ ಇದ್ದಂತೆ. ಕನ್ನಡ ಭಾಷೆ ನಮಗರಿವಿಲ್ಲದಂತೆ ನಮ್ಮಲ್ಲಿ ವಾತ್ಸಲ್ಯ ಮೂಡಿಸುತ್ತದೆ. ನಮ್ಮ ಭಾಷೆ ಹಾಲು ಜೇನಿನ ಸಂಗಮ ಇದ್ದ ಹಾಗೆ. ಇದು ನಮ್ಮ ಉಸಿರಿನ ಭಾಷೆ, ಹೆಸರಿನ ಭಾಷೆ, ಹೃದಯದ ಭಾಷೆ. ಇಂತಹ ಶ್ರೇಷ್ಠ ಭಾಷೆಯನ್ನು ಉಳಿಸಿ ಬೆಳೆಸುವ ಹೊಣೆ ನಮ್ಮದು ಎಂದರು.
ಕನ್ನಡ ಭಾಷೆಗೆ ಎರಡೂವರೆ ವರ್ಷಗಳ ಇತಿಹಾಸವಿದ್ದು ಕನ್ನಡ ಸಾಹಿತ್ಯಕ್ಕೆ ಒಂದೂವರೆ ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯ ಕ್ಷೇತ್ರದ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಓದಿನಿಂದ ನಮ್ಮ ಅರಿವು ವಿಸ್ತಾರವಾಗುತ್ತದೆ. ಇಂದು ಉದ್ಘಾಟನೆಗೊಂಡ ಕಸಾಪ ಅಂಜನಾಪುರ ಹೋಬಳಿ ಘಟಕ ಕ್ರಿಯಾಶೀಲವಾಗಿ ಚಟುವಟಿಕೆ ನಡೆಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ರಘು ಮಾತನಾಡಿ, ಕನ್ನಡ ಭಾಷೆ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ 1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಸಾಹಿತ್ಯ ಪರಿಷತ್ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸುತ್ತಿದೆ. ಕನ್ನಡ ನಾಡು, ನುಡಿಗೆ ಧಕ್ಕೆಯಾದಾಗ ಹೋರಾಟ ನಡೆಸಿದೆ. ಗ್ರಾಮೀಣ ಭಾಗದಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಹೋಬಳಿ ಘಟಕಗಳನ್ನು ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳು ಸಾಹಿತ್ಯ ಪರಿಷತ್ತಿನ ಮೂಲಕ ನಿಮ್ಮಲ್ಲಿನ ಸಾಹಿತ್ಯದ ಪ್ರತಿಭೆಯನ್ನು ಪ್ರದರ್ಶಿಸಬಹುದಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸದಸ್ಯ ಚುರ್ಚಿಗುಂಡಿ ಪ್ರೊ.ಬಸವನಗೌಡ್ರು ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸಾಹಿತ್ಯ ಸ್ನೇಹಿತ ಇದ್ದಂತೆ,ಸಾಹಿತ್ಯ ಓದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಈಸೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರವೀಣ್ ಮಹಿಷಿ ಅಧ್ಯಕ್ಷತೆ ವಹಿಸಿದ್ದರು. ಗಾಮ ಗ್ರಾಮದ ಪ್ರಗತಿ ಯುವತಿ ಮಂಡಳಿಯ ಜ್ಯೋತಿ ಹಾಗೂ ಸಂಗಡಿಗರು ಜಾನಪದ ಗಾಯನ ನಡೆಸಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಯಣ್ಣ, ಜಿಲ್ಲಾ ಕಸಾಪ ಕಾರ್ಯದರ್ಶಿ ಗಣೇಶಪ್ಪ, ಸಂಘಟನಾ ಕಾರ್ಯದರ್ಶಿ ಕೆ.ಎಸ್.ಹುಚ್ರಾಯಪ್ಪ, ತಾಲೂಕು ಕಾರ್ಯದರ್ಶಿ ಬಿ.ಎನ್. ಸುನೀಲ್ಕುಮಾರ್, ಅಂಜನಾಪುರ ಹೋಬಳಿ ಘಟಕ ಅಧ್ಯಕ್ಷ ಚನ್ನೇಶ್ ಚುರ್ಚಿಗುಂಡಿ, ಕೋಶಾಧ್ಯಕ್ಷ ಕಾಳೇಶಪ್ಪ, ಪದಾಧಿಕಾರಿಗಳಾದ ಕಲ್ಮನೆ ಸುರೇಶ್, ಸತೀಶ್‌ಚಂದ್ರ, ಲೋಕೇಶ್ ಮಕರಿ, ವೆಂಕಟೇಶ್, ಉಪನ್ಯಾಸಕರಾದ ಗೋಪಾಲ ಗೌಡ, ಪ್ರಶಾಂತ್, ಗಂಗಪ್ಪ, ಕೆ.ಬಿ.ಸಂದೀಪ್, ಶೃತಿ, ವಿಜಯಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net