

ಗೋಕರ್ಣ: ವೈಯಕ್ತಿಕವಾಗಿ ನಾವು ಸಾಧಿಸಲು ಶಕ್ಯವಾಗದಿರುವುದನ್ನು ಸಮಷ್ಟಿಯ ಮತ್ತು ಸಂಘಟನೆಯ ಮೂಲಕ ಸಾಧಿಸಬಹುದಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಸಮ್ಮುಖ ಸರ್ವಾಧಿಕಾರಿ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ತಿಮ್ಮಪ್ಪ ಮಡಿಯಾಳ್ ನುಡಿದರು.
ಶ್ರೀಮಠದ ಹವ್ಯಕ ಮಹಾ ಮಂಡಲದ ವತಿಯಿಂದ ಭಾನುವಾರ ಆಯೋಜಿಸಲಾದ ’ನಾನು ನಮ್ಮ ಮಠ’ ಪರಿಕಲ್ಪನೆಯ ವಿಶೇಷ ತರಬೇತಿ ಶಿಬಿರದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.
ಶ್ರೀಮಠಕ್ಕೆ ಕಾರ್ಯಕರ್ತರು ಇದ್ದರೆ ಸಾಲದು. ಅವರನ್ನು ಶ್ರೀಮಠದ ಸಮರ್ಥ ವಕ್ತರರಾಗಿ ಸಜ್ಜುಗೊಳಿಸುವ ಅಗತ್ಯ ಬಹಳವಿದೆ. ಇಂಥ ಸರ್ವ ಸನ್ನದ್ಧ ಕಾರ್ಯಕರ್ತ ವಕ್ತಾರರ ಮೂಲಕ ಶ್ರೀಮಠದ ಪರಂಪರೆ, ಸಾಧನೆ, ಸೇವಾ ಕಾರ್ಯ ಮತ್ತು ಸಮಾಜದಲ್ಲಿ ಮಠದ ಮಹತ್ವದ ಬಗ್ಗೆ ಅರಿವು ಮೂಡಿಸಲು ಇಂತಹ ಶಿಬಿರಗಳ ಅವಶ್ಯಕತೆಯಿದೆ ಎಂದರು.
ವಿಡಿಯೋ ಸಂದೇಶದ ಮೂಲಕ ಆಶೀರ್ವಚನ ಅನುಗ್ರಹಿಸಿದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನಮ್ಮ ಯುವ ಜನತೆ ಶಿಕ್ಷಣವಂತರಾದರೆ ಸಾಲದು. ಅವರು ಸರಿಯಾದ ಪಥವನ್ನು ಅನುಸರಿಸುವಂತಾಗಬೇಕು. ನಮ್ಮ ಆಚರಣೆಗಳು, ಸಂಪ್ರದಾಯ, ಸನಾತನತ್ವ ಮುಂತಾದವುಗಳ ಬಗ್ಗೆ ಸಂಪೂರ್ಣವಾದ ಜಾಗೃತಿಯಿರಬೇಕು ಎಂದರು.
ಹಿರಿಯ ವಿದ್ವಾಂಸ ಶಿವರಾಮ ಅಗ್ನಿಹೋತ್ರಿ ಶಿಬಿರವನ್ನು ಉದ್ಘಾಟಿಸಿದರು.
ಹವ್ಯಕ ಮಹಾ ಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಶಿಬಿರದ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ವಾನ್ ಜಗದೀಶ ಶರ್ವ, ಡಾ.ರಾಮಕೃಷ್ಣ ಭಟ್ಟ ಕೂಟೇಲು, ಆಡಳಿತ ಖಂಡದ ಸಂಯೋಜಕ ಪ್ರಮೋದ ಪಂಡಿತ, ಸಂಘಟನಾ ಖಂಡದ ಸಂಯೋಜಕ ಡಾ.ವೈ.ವಿ.ಕೃಷ್ಣಮೂರ್ತಿ, ಲೆಕ್ಕ ಪರಿಶೋಧಕ ವೇಣು ವಿಘ್ನೕಶ ಸಂಪ, ಸಿದ್ದಾಪುರ ಮಂಡಲಾಧ್ಯಕ್ಷ ಮಹೇಶ ಚಟ್ನಳ್ಳಿ, ನೀಲಕಂಠ ಯಾಜಿ ಬೈಲೂರು, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮತ್ತು ದೇವಿಕಾ ಶಾಸ್ತ್ರಿ ಭಾಗವಹಿಸಿದರು. ಮಹಾಮಂಡಲದ ಪ್ರ.ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು ಅವಲೋಕನ ನಡೆಸಿಕೊಟ್ಟರು. ಶ್ರೀಮಠದ ಮತ್ತು ಹವ್ಯಕ ಮಹಾಮಂಡಲದ ವಿವಿಧ ಪ್ರಮುಖರು ಉಪಸ್ಥಿತರಿದ್ದರು.