

ಶಿವಮೊಗ್ಗ: ಬಿಜೆಪಿ ಕಟ್ಟಿ ಬೆಳೆಸಿದವರಲ್ಲಿ ನಾನೂ ಒಬ್ಬ. ಬೇರೆ ಪಕ್ಷದಿಂದ ಬಂದಿರುವವನು ನಾನಲ್ಲ. ಪಕ್ಷ ಬಿಡುವ ಅಗತ್ಯತೆಯೂ ನನಗಿಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಸೊರಬದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಬಿಟ್ಟು ಹೋದ ಕೆಲವರು ಮತ್ತೆ ಬಿಜೆಪಿಗೆ ಬಂದಿದ್ದಾರೆ. ಈ ಜಿಲ್ಲೆಯಲ್ಲೂ ಅಂತಹವರಿದ್ದಾರೆ. ಪಕ್ಷ ಬಿಡುವ ವ್ಯಕ್ತಿ ನಾನಲ್ಲ ಎನ್ನುವ ಮೂಲಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದರು.
ನಾನು ಬಿಜೆಪಿಯವನು. ಪಕ್ಷ ಕಟ್ಟಿರುವವನು ನಾನೇಕೆ ಅಂತಹ ರಿಸ್ಕ್ ತಗೊಳ್ಳಲಿ. ಸೋತ ಮೇಲೆ ಪಕ್ಷ ಸರಿ ಇಲ್ಲ ಎನ್ನುವ ಮಾತು ಬಂದೇ ಬರುತ್ತವೆ. ಪಕ್ಷದೊಳಗೆ ಆತ್ಮಾವಲೋಕನ ಆಗಬೇಕಿತ್ತು. ಆದರೆ ಆ ಕಾರ್ಯ ಇನ್ನೂ ಆಗಿಲ್ಲ. ಯಾವಾಗ ಆಗುತ್ತದೋ ಗೊತ್ತಿಲ್ಲ ಎಂದರು.
ಶಿವಮೊಗ್ಗಕ್ಕೆ ಬಂದಿದ್ದ ಅವರಿಗೆ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೀರಾ ಎಂದು ಕೆಲವರು ಪ್ರಶ್ನಿಸಿದರು. ಆದರೆ ಅದಕ್ಕೆ ಅವರು ನಾನೇಕೆ ಬಿಜೆಪಿ ಬಿಡಲಿ ಎಂದು ಮರು ಪ್ರಶ್ನೆ ಹಾಕಿದರು. ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೂತನ ಪದಾಧಿಕಾರಿಗಳ ನೇಮಕವನ್ನು ವ್ಯಂಗ್ಯವಾಡಿ ಕೆಜೆಪಿ-2 ಎಂಬ ಹೇಳಿಕೆಗೆ ಉತ್ತರಿಸಲು ನಿರಾಕರಿಸಿದರು.
ಬಂಗಾರಪ್ಪ ಹೆಸರು ಚಿರಸ್ಥಾಯಿ
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಂಗಾರಪ್ಪ ಅವರು ರಾಜ್ಯ ರಾಜಕಾರಣದಲ್ಲಿ ಚಿರಸ್ಥಾಯಿ ಆಗಿದ್ದಾರೆ. ನಮ್ಮ ಪಕ್ಷಕ್ಕೂ ಅವರು ಬಂದಿದ್ದರು. ಅವರು ಬಿಜೆಪಿಗೆ ಬಂದಿದ್ದಾಗ ಎಲ್ಲರ ಪರಿಶ್ರಮದೊಂದಿಗೆ 79 ಸ್ಥಾನ ಗೆದ್ದಿದ್ದೆವು ಎಂದು ಸ್ಮರಿಸಿದರು. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅದಕ್ಕೆ ಬಂಗಾರಪ್ಪ ಅವರು ಕಾರಣಿಭೂತರು. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅವರೊಂದಿಗೆ ನಾನೇ ಓಡಾಡುತ್ತಿದ್ದೆ ಎಂದರು.