

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಲ್ಲಿ ನಾನೂ ಒಬ್ಬ ಎಂದು ಕೆಪಿಸಿಸಿ ಸಂಯೋಜಕ ಡಾ. ಶರಣಪ್ಪ ಕೊಟಗಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ನಾನು ತೊಡಗಿಕೊಂಡಿದ್ದೇನೆ. ಕ್ಷೇತ್ರದ ಮತದಾರರ ತೀವ್ರ ಒತ್ತಾಸೆ ಮೇರೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದರು.
ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯ ವೀರಶೈವ-ಲಿಂಗಾಯತ ಮತದಾರರು ಇದ್ದಾರೆ. ಪಕ್ಷದ ನಾಯಕರು ಹಾಗೂ ಎಲ್ಲ ಸಮಾಜದವರ ಜತೆ ಒಳ್ಳೆಯ ಸಂಬಂಧ ಹೊಂದಿದ್ದೇನೆ. ನನಗೆ ಟಿಕೆಟ್ ಲಭಿಸಿದರೆ ಪ್ರಲ್ಹಾದ ಜೋಶಿ ವಿರುದ್ಧ ಅತ್ಯಧಿಕ ಮತಗಳ ಅಂತರದಿಂದ ಗೆಲವು ಸಾಧಿಸುವುದು ನಿಶ್ಚಿತ ಎಂದರು.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ವರಿಷ್ಠರ ಮುಂದೆ ಮೌಖಿಕವಾಗಿ ತಿಳಿಸಿದ್ದೇನೆ. ಪಕ್ಷದ ಬಹುತೇಕ ವರಿಷ್ಠರು ಸಮ್ಮತಿ ಸೂಚಿಸಿದ್ದಾರೆ. ಒಂದು ವೇಳೆ ಟಿಕೆಟ್ ಸಿಗದೇ ಹೋದರೆ ಬಂಡಾಯ ಏಳುವುದು, ಬಿಡುವುದು ಮುಂದಿನ ನಿರ್ಧಾರ ಎಂದರು.
ಪ್ರಮುಖರಾದ ಶಾಂತಣ್ಣ ಕಡಿವಾಲ, ವಿ.ಜಿ. ಪಾಟೀಲ, ಎಂ.ಎಚ್. ಚಳ್ಳಮರದ ಶೇಖ, ಗೌಸ್ ಪಿಂಜಾರ, ಮೋಹನ ಹೊಸಮನಿ ಸುದ್ದಿಗೋಷ್ಠಿಯಲ್ಲಿದ್ದರು.