ಮುಖ್ಯಮಂತ್ರಿ ಬದಲಾವಣೆ ನಾನು ಹೇಳಲ್ಲ

mla belur gopalkrishan
Published on

ಶಿವಮೊಗ್ಗ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಐದು ವರ್ಷ ಮುಂದುವರಿಯಲಿದ್ದಾರೆಂದು ನಾನು ಹೇಳಲು ಸಾಧ್ಯವಿಲ್ಲ. ಆದರೆ ಅದು ಹೈಕಮಾಂಡ್‌ಗೆ ಬಿಟ್ಟ ವಿಷಯ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ನಮ್ಮ ಪಕ್ಷದವರೇ ಗೊಂದಲ ಮೂಡಿಸುತ್ತಿದ್ದಾರೆ. ಇದು ಎಲ್ಲ ಪಕ್ಷದಲ್ಲೂ ಇದ್ದೇ ಇರುತ್ತದೆ. ನಮ್ಮ ಪಕ್ಷದಲ್ಲಿ ನೊಣ ಸತ್ತು ಬಿದ್ದರೆ, ಬಿಜೆಪಿಯಲ್ಲಿ ಹೆಗ್ಗಣವೇ ಸತ್ತು ಬಿದ್ದಿದೆ. ಹಾಗಾಗಿ ಸಿಎಂ ಬದಲಾವಣೆಯನ್ನು ವರಿಷ್ಠರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಕರೆದಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೋಗಿದ್ದಾರೆ. ಅದನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಂಡರೆ ಏನೆಂದು ಹೇಳಬೇಕು ಎಂದು ಪ್ರಶ್ನಿಸಿದ ಅವರು, ಆರ್‌ಎಸ್‌ಎಸ್‌ನಲ್ಲಿ ಎರಡು ವಿಭಾಗವಿದೆ. ಒಂದು ಭಾಗ ಇಂತಹ ಬೇಡದ ರಾಜಕಾರಣವನ್ನೇ ಮಾಡುತ್ತದೆ. ಹಿಂದು ಆಗಿ ಕುಂಭಮೇಳಕ್ಕೆ ಡಿ.ಕೆ.ಶಿವಕುಮಾರ್ ಹೋಗಿದ್ದಾರೆ. ಅದನ್ನು ಬಿಜೆಪಿಗೆ ಹೋಗುತ್ತಾರೆಂದು ಬಿಂಬಿಸುವುದು ಸರಿಯಲ್ಲ ಎಂದರು.

ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಆದರೆ ಯಾರ ಮೇಲೂ ಒತ್ತಡ ಹಾಕುವುದಿಲ್ಲ ಎಂದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಜನ್ಮದಿನಕ್ಕೆ ಶುಭಾಶಯ ಕೋರಿದರು. ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಒಡನಾಡಿಗಳನ್ನು ಬೆಂಗಳೂರಿಗೆ ವಿಮಾನದಲ್ಲಿ ಕರೆದೊಯ್ದಿದ್ದು ಸಂತೋಷದ ವಿಷಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net