ಭವಿಷ್ಯ ಹೇಳಲು ನಾನು ಜ್ಯೋತಿಷಿ ಅಲ್ಲ

Shivarama Hebbar
Published on

ಮುಂಡಗೋಡ: ನಾನು ಇಲ್ಲಿಯವರೆಗೆ ಬಿಜೆಪಿ ಶಾಸಕನಾಗಿದ್ದೇನೆ ಮುಂದಿನ ಭವಿಷ್ಯ ಹೇಳಲು ಜ್ಯೋತಿಷಿಯಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಸೋಮವಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ತಿಂಗಳು ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಕ್ಷೇತ್ರದಲ್ಲಿ ವದಂತಿ ಹರಡಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.

ಭೇಟಿ ಹಿಂದೆ ರಾಜಕೀಯವಿಲ್ಲ: ಮುಖ್ಯಮಂತ್ರಿಯನ್ನು ರಾಜಕೀಯ ಉದ್ದೇಶದಿಂದ ಭೇಟಿಯಾಗಿಲ್ಲ. ನಮ್ಮ ಕ್ಷೇತ್ರದಲ್ಲಿ ಮಳೆ ಕಡಿಮೆಯಾಗಿ ಬೆಳೆ ಹಾನಿಯಾಗಿದೆ. ನನ್ನ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೊಷಣೆ ಮಾಡುವಂತೆ ಮನವಿ ಸಲ್ಲಿಸಿದ್ದೇನೆ. ಯಾವ ರಾಜಕೀಯ ವಿಷಯಗಳ ಬಗ್ಗೆ ರ್ಚಚಿಸಿಲ್ಲ ಎಂದರು.

ಉದ್ಘಾಟನೆಗೆ ಡಿಸಿಎಂ: ತಾಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆಯನ್ನು ಉದ್ಘಾಟಿಸಲು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಕರೆತರುವ ಉದ್ದೇಶವಿದೆ. ಈಗಾಗಲೇ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡಿದ್ದೇನೆ. ನೀರಾವರಿ ಯೋಜನೆಯ ವಿದ್ಯುತ್ ಜೋಡಣೆ ಕಾರ್ಯಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಮಾಣಪತ್ರ ನೀಡುತ್ತಾರೆ. ನಂತರ ಜಲ ಸಂಪನ್ಮೂಲ ಇಲಾಖೆಯವರು ಉದ್ಘಾಟನೆಗೆ ಅನುಮತಿ ನೀಡಿದ ನಂತರ ದಿನಾಂಕವನ್ನು ನಿಗದಿ ಪಡಿಸಲಾಗುವುದು ಎಂದರು.

ಯಲ್ಲಾಪುರ ಕ್ಷೇತ್ರದಲ್ಲಿ ಶೇ. 70ರಷ್ಟು ಮಳೆ ಕಡಿಮೆ ಆಗಿದೆ. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕಬ್ಬು ಬೆಳೆ ಕೂಡ ಕುಂಠಿತಗೊಂಡಿದೆ. ರಾಜ್ಯದ 176ತಾಲೂಕಿನಲ್ಲಿ ಬರದ ಛಾಯೆಯಿದ್ದು, ಈ ಬಗ್ಗೆ ಕೃಷಿ ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೆ ಹವಾಮಾನ ಇಲಾಖೆಯವರು ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಆಗಲಿದೆ ಎಂದು ತಿಳಿಸಿದ್ದಾರೆ. ಬರಪೀಡಿತ ತಾಲೂಕು ಎಂದು ಘೊಷಣೆ ಮಾಡಲು ರಾಜ್ಯ ಸರ್ಕಾರದ ಮಾರ್ಗಸೂಚಿಯಿಂದ ಸಾಧ್ಯವಿಲ್ಲ. ಕೇಂದ್ರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಮಾಡಬೇಕಾಗುತ್ತದೆ. ಕೇಂದ್ರದ ಸರ್ಕಾರ ಆದೇಶದಲ್ಲಿ ಶೇ. 60ರಷ್ಟು ಬೆಳೆ ಹಾನಿಯಾದರೆ ಮಾತ್ರ ಬರಪೀಡಿತ ಮಾಡಲು ಅವಕಾಶವಿದೆ. ಕೇಂದ್ರದ ಈ ಮಾರ್ಗಸೂಚಿಯನ್ನು 30ಕ್ಕೆ ಇಳಿಸುವಂತೆ ಆಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net