ನಾನು ಮೇಸ್ತ್ರಿಯಲ್ಲ, ಶಾಸಕ: ಆರಗ

Araga
ಆರಗ ಜ್ಞಾನೇಂದ್ರ, ಶಾಸಕ
Published on

ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಉದ್ಘಾಟನೆಗೊಂಡಿರುವ ಕಾಮಗಾರಿಗಳು ಕಳಪೆಯಾಗಿವೆ ಎಂದು ಕಾಂಗ್ರೆಸ್‌ನವರು ಆರೋಪದ ಸುರಿಮಳೆಗೈಯುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮೊದಲ ಬಾರಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಮೇಸ್ತ್ರಿಯಲ್ಲ, ಶಾಸಕ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಗುತ್ತಿಗೆದಾರನೂ ಅಲ್ಲ, ಮೇಸ್ತ್ರಿಯೂ ಅಲ್ಲ. ಮಲೆನಾಡಿನಲ್ಲಿ ಮಳೆಗಾಲದ ವೇಳೆ ಕೆಲವು ಕಟ್ಟಡಗಳು ಲೀಕೇಜ್ ಆಗುವುದು ಸಹಜ. ಎಲ್ಲ ಕಟ್ಟಡಗಳೂ ಸೋರುತ್ತಿಲ್ಲ. ಎಲ್ಲವೂ ಸುರಕ್ಷಿತವಾಗಿಯೇ ಇವೆ. ರಾಜಕಾರಣಕ್ಕಾಗಿ ಆರೋಪ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಸುಮಾರು 13 ಕೊಟಿ ರೂ. ವೆಚ್ಚದಲ್ಲಿ ತೀರ್ಥಹಳ್ಳಿ ತಾಪಂ ಕಟ್ಟಡ ನಿರ್ಮಾಣವಾಗಿದೆ. ಅದರಲ್ಲಿ ಸಣ್ಣಪುಟ್ಟ ನ್ಯೂನತೆಗಳಿರಬಹುದು. ನಾನು ನಿಂತು ಕೆಲಸ ಮಾಡಿಸಲು ಸಾಧ್ಯವಿಲ್ಲ. ಬೈಪಾಸ್‌ಗೆ ತಡೆಗೋಡೆ ಕಟ್ಟಿದ್ದು ಮಣ್ಣು ರಸ್ತೆಗೆ ಬಾರದಿರಲಿ ಎಂಬ ಉದ್ದೇಶದಿಂದ. ಆದರೆ ಗುಡ್ಡವೇ ಕುಸಿದರೆ ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಆರಗ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಶೇಖರನ್ ಡೆತ್‌ನೋಟ್‌ನಲ್ಲಿ ಸಚಿವರ ಬಗ್ಗೆ ಉಲ್ಲೇಖವಿದೆ. ಆದರೆ ಎಸ್‌ಐಟಿ ಎಫ್‌ಐಆರ್‌ನಲ್ಲಿ ಸಚಿವ ಹೆಸರೇ ಇಲ್ಲ. ಸರ್ಕಾರ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ರಕ್ಷಣೆ ಮಾಡುವ ಪ್ರಯತ್ನದಲ್ಲಿದೆ ಎಂದು ದೂರಿದರು.
ಎಸ್‌ಐಟಿ ರಾಜ್ಯ ಸರ್ಕಾರದ ಆಜ್ಞೆಯಂತೆ ಕೆಲಸ ಮಾಡುತ್ತಿದೆ. ಸತ್ಯ ಹೇಗೆ ಹೊರಗೆ ಬರುತ್ತದೆ? ಈ ಹಗರಣದಲ್ಲಿನ ಹಣ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಳಕೆಯಾಗಿದೆ ಎಂದು ಜಾರಿ ನಿರ್ದೇಶನಾಲಯದ ತನಿಖೆಯಿಂದ ದೃಢಪಟ್ಟಿದೆ ಎಂದರು.
ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬದ ಪಾತ್ರ ಎದ್ದುಕಾಣುತ್ತಿದೆ. ನನ್ನ ರಾಜಕಾರಣದಲ್ಲಿ ಒಂದು ಕಪ್ಪು ಚುಕ್ಕೆಯೂ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅವರ ಮೈತುಂಬ ಈಗ ಕಪ್ಪು ಚುಕ್ಕೆಗಳೇ ಕಾಣುತ್ತಿವೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net