ಲೋಕಸಭಾ ಚುನಾವಣೆಗೆ ನಾನು ಅಭ್ಯರ್ಥಿಯಲ್ಲ

Published on

ಮೈಸೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಸಿದ್ಧತೆ ನಡೆಯುತ್ತಿದೆ. ಸಚಿವರು ಸ್ಪರ್ಧಿಸಬೇಕೆಂದು ಎಲ್ಲೂ ಚರ್ಚೆಯಾಗಿಲ್ಲ, ಒತ್ತಾಯವೂ ಇಲ್ಲ. ಗೆಲ್ಲುವ ಅವಕಾಶ ಆಧರಿಸಿ ಅಭ್ಯರ್ಥಿಗಳ ಆಯ್ಕೆಯಾಗಲಿದೆ. ನಾನು ಲೋಕಸಭಾ ಚುನಾವಣೆಯ ಅಭ್ಯರ್ಥಿಯಲ್ಲ. ಬದಲಿಗೆ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ನಗರದ ಕಲಾಮಂದಿರದ ಆಚರಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ಮಗ ಸುನಿಲ್ ಬೋಸ್‌ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ. ಆತನಿಗೆ ಮೂರು ಬಾರಿ ವಿಧಾನಸಭೆ ಚುನಾವಣೆಯ ಟಿಕೆಟ್ ಕೊಟ್ಟಿಲ್ಲ. ಆದರೂ ಬೇಸರ ಮಾಡಿಕೊಳ್ಳದೆ ಪಕ್ಷದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾನೆ. ಸಹಜವಾಗಿಯೇ ಅವನಿಗಿಂತ ಕಿರಿಯರು ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದಾರೆ. ನನ್ನ ಮಗನಿಗೇ ಟಿಕೆಟ್ ಕೊಡಿ ಎಂದು ನಾನು ಎಂದೂ ಶಿಫಾರಸ್ಸು ಮಾಡಿಲ್ಲ. ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್. ಧ್ರುವನಾರಾಯಣ ಅವರು ಹಠಾತ್ ನಿಧನರಾದ ನಂತರ ಅವರ ಮಗ ದರ್ಶನ್‌ಗೆ ಟಿಕೆಟ್ ನೀಡಲು ಶಿಫಾರಸ್ಸು ಮಾಡಿದೆ. ಸ್ವತಃ ಸುನಿಲ್ ಬೋಸ್ ದರ್ಶನ್‌ಗೆ ಟಿಕೆಟ್ ಕೊಡುವಂತೆ ಹೇಳಿದ್ದ ಎಂದು ತಿಳಿಸಿದರು.

ನಮ್ಮ ಪಕ್ಷದ ಸದಸ್ಯರಲ್ಲದ ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್‌ಗೆ ಕರೆತಂದಾಗ ನಂಜನಗೂಡು ಉಪಚುನಾವಣೆಯಲ್ಲಿ ಸುನಿಲ್ ಬೋಸ್ ಅವರ ಪರ ಕೆಲಸ ಮಾಡಿ ಗೆಲ್ಲಿಸಿದ್ದಾನೆ. ಕಾಂಗ್ರೆಸ್‌ನಲ್ಲಿ ಕಾರ್ಯಕರ್ತನಾಗಿ ಈಗಲೂ ದುಡಿಯುತ್ತಿದ್ದಾನೆ. ಲೋಕಸಭಾ ಚುನವಣೆಯಲ್ಲಿ ಆತನಿಗೆ ಟಿಕೆಟ್ ನೀಡುವಂತೆ ಕೇಳುವುದರಲ್ಲಿ ತಪ್ಪೇನಿದೆ? ಎನ್ನುವ ಮೂಲಕ ಪರೋಕ್ಷವಾಗಿ ಸುನಿಲ್ ಬೋಸ್ ಪರ ಬ್ಯಾಟ್ ಬೀಸಿದರು.

ಆದರೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಇದುವರೆಗೂ ಕಾಂಗ್ರೆಸ್ ಚುನಾವಣಾ ಸಮಿತಿ (ಸಿಇಸಿ) ಸಭೆಯೇ ನಡೆದಿಲ್ಲ. ಹಾಗಾಗಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿದೆ ಎಂಬ ವಿಚಾರ ಅಂತೆಕಂತೆ ಅಷ್ಟೇ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಮಾಂಸ ತಿಂದು ಸುತ್ತೂರಿಗೆ ಭೇಟಿ ನೀಡಿದ್ದಾರೆಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ಅವರು ನಮಗೆ ಊಟ ಬಡಿಸಿದ್ರಾ? ಮಾಂಸದ ಸಾರು ಬಡಿಸಿದ್ರಾ? ಎಂದು ಹರಿಹಾಯ್ದ ಅವರು, ಬಿಜೆಪಿಯವರಿಗೆ ಜನರ ಮೂಲಭೂತ ಹಕ್ಕುಗಳು, ಅವರ ಕಷ್ಟಗಳ ಬಗ್ಗೆ ಅರಿವಿಲ್ಲ. ಸಂವಿಧಾನದ ಆಶಯ ಗೊತ್ತಿಲ್ಲದವರು ಈ ರೀತಿ ಮಾತನಾಡುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಬಿಜೆಪಿಯವರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಬೇಕು. ಅದು ಬಿಟ್ಟು ಈ ರೀತಿ ಬೇಜವಾಬ್ದಾರಿಯುತ ಹೇಳಿಕೆ ನೀಡಬಾರದು ಎಂದು ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net