ಬಿಜೆಪಿಯ ದೊಡ್ಡ ನಾಯಕರಿಗಿಂತ ನಾನೇ ಪಾರ್ಟಿಗೆ ಸಿನೀಯರ್ : ಪ್ರತಾಪ್ ಸಿಂಹ

Pratap Simha
Published on

ಮೈಸೂರು: ನಾನು ಪಕ್ಷಕ್ಕೆ ಬ್ಯಾನರ್, ಬಂಟಿಂಗ್ ಕಟ್ಟಿಲ್ಲದೆ ಇರಬಹುದು. ಆದರೆ, ಲೇಖನಗಳ ಮೂಲಕ ಯುವ ಸಮೂಹವನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇನೆ. ಬಿಜೆಪಿಯ ದೊಡ್ಡ ನಾಯಕರಿಗಿಂತ ನಾನು ಪಾರ್ಟಿಗೆ ಸಿನೀಯರ್. ಏಕೆಂದರೆ ನನ್ನ ತಂದೆ ಆರ್‌ಎಸ್‌ಎಸ್ ನಲ್ಲಿದ್ದರು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಯಾರನ್ನು ಓಲೈಸಲು ರಾಜಕಾರಣ ಮಾಡುವುದಿಲ್ಲ. ಟಿಕೆಟ್‌ಗೋಸ್ಕರ ಯಾರ ಮನೆ ಬಾಗಿಲನ್ನೂ ತಟ್ಟುವುದಿಲ್ಲ. ಏಕೆಂ ದರೆ ನನಗೆ ಟಿಕೆಟ್ ಕೊಟ್ಟಿದ್ದು ಬಿಜೆಪಿ ಅಲ್ಲ, ರಾಷ್ಟ್ರೀಯ ಸ್ವಯಂ ಸೇವಾ ಸಂಘ ಎಂದು ಹೇಳಿದರು.

ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಸೆ.17 ರಿಂದ ಪಾದಯಾತ್ರೆ ನಡೆಸಲು ಬೆಳಗಾವಿಯಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ನಾನು ಸಹ ಆ ಸಭೆಯಲ್ಲಿ ಪಾಲ್ಗೊಂಡಿದ್ದೆ. ಸಭೆಯಲ್ಲಿ ಪಾಲ್ಗೊಂಡ ಮಾತ್ರಕ್ಕೆ ನನ್ನನ್ನು ರೆಬಲ್ ಎಂದು ಕರೆಯುವುದು ಸರಿಯಲ್ಲ. ನಾನು ಅನ್ಯಾಯದ ವಿರುದ್ದ ಅಷ್ಟೆ ರೆಬೆಲ್, ಪಕ್ಷದ ವಿರುದ್ದ ರೆಬೆಲ್ ಅಲ್ಲ. ನಾನು ಮೈಸೂರು ಚಲೋ ಪಾದಯಾತ್ರೆಯಲ್ಲೂ ಪಾಲ್ಗೊಂಡಿದ್ದೆ. ಮೈಸೂರು ಪಾದಯಾತ್ರೆ ಯಾವ ರೀತಿ ಯಶಸ್ವಿಯಾಯಿತು ಎಂಬ ವಿಚಾರವನ್ನು ಆ ಸಭೆಯಲ್ಲಿ ಹಂಚಿಕೊಂಡೆ. ವಾಲ್ಮೀಕಿ ನಿಗಮ ಹಗರಣದ ಪಾದಯಾತ್ರೆಯನ್ನು ಹೈಕಮಾಂಡ್ ಒಪ್ಪಿಗೆ ಪಡೆದುಕೊಂಡೇ ಪ್ರಾರಂಭಿಸಲಾಗುವುದು. ವಾಲ್ಮೀಕಿ ನಿಗಮ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತದೆ ಎಂದರು.

ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹ ದೊಡ್ಡ ನಾಯಕರು ಕರೆದ ಕಾರಣಕ್ಕೆ ನಾನು ಸಭೆಗೆ ಹೋಗಿದ್ದೆ. ವಾಲ್ಮೀಕಿ ನಿಗಮ ಹಗರಣದ ಪಾದಯಾತ್ರೆ ಯಾರ ಮೇಲಾಟದ ಕಾರ್ಯಕ್ರಮವಲ್ಲ, ಯಾರ ನಾಯಕತ್ವ ಪ್ರದರ್ಶನವೂ ಅಲ್ಲ. ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಕೊಡುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರ ಆದಿಯಾಗಿ ಎಲ್ಲರನ್ನು ಪಾದಯಾತ್ರೆಗೆ ಕರೆಯುತ್ತಾರೆ ಎಂಬ ವಿಶ್ವಾಸವಿದೆ. ಕ್ಷೇತ್ರ, ಜಾತಿ ಆಚೆಗೆ ಜನಪ್ರಿಯತೆಯನ್ನು ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕೆಲವೇ ಕೆಲವು ನಾಯಕರು ಹೊಂದಿದ್ದು, ಆ ಸಾಲಿನಲ್ಲಿ ನಾನು ಸಹ ಇದ್ದೇನೆ. ಈ ಬಗ್ಗೆ ಯಾರಿಗಾದರೂ ಅನುಮಾನ ಇದೆಯಾ ಎಂದು ಪ್ರಶ್ನಿಸಿದರು.

ಗೌರಿ ಲಂಕೇಶ್ ಹತ್ಯೆ ಆರೋಪಿಯ ಭೇಟಿಯಾದ ವಿಚಾರ ಕುರಿತು ಸಚಿವ ದಿನೇಶ್ ಗುಂಡೂರಾವ್ ಟ್ವೀಟ್‌ಗೆ ತಿರುಗೇಟು ನೀಡಿದ ಪ್ರತಾಪ್ ಸಿಂಹ, ರಾಜಕಾರಣಿಗಳ ಮಕ್ಕಳಿಗೆ ಅಪ್ಪಂದಿರ ಪ್ರತಿಭೆ ವರ್ಗಾವಣೆ ಆಗುವುದಿಲ್ಲ. ದಿನೇಶ್ ಗುಂಡೂರಾವ್ ವಿಚಾರದಲ್ಲೂ ಅದೇ ಆಗಿದೆ. ಪ್ರಕರಣದ ಆರೋಪಿಯನ್ನು ಮಾತಾಡಿಸುವುದೇ ತಪ್ಪಾ? ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಬ್ಬರೂ ಆರೋಪಿಗಳು. ಕಾಂಗ್ರೆಸ್ ನಾಯಕರು ಏತಕ್ಕೆ ಹೋಗಿ ಅವರ ಕಾಲಿಗೆ ಬೀಳುತ್ತಾರೆ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net