ನಾನು ಪ್ರಬಲ ಆಕಾಂಕ್ಷಿ: ಡಾ.ಪುಷ್ಪ ಅಮರ್‌ನಾಥ್

pushpa
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪೂರ್ವದ ಭರವಸೆಯನ್ನು ಈಡೇರಿಸುವ ಮೂಲಕ ದೇಶದಲ್ಲಿ ಗ್ಯಾರಂಟಿ ರಾಮಯ್ಯನೆಂದು ಹೆಸರು ಪಡೆದುಕೊಂಡಿದ್ದಾರೆ. ನುಡಿದಂತೆ ನಡೆದಿದ್ದೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಾರಿ ನ್ಯಾಯವನ್ನು ಅನುಷ್ಠಾನ ಮಾಡುತ್ತೇವೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಡಾ.ಪುಷ್ಪ ಅಮರ್‌ನಾಥ್ ತಿಳಿಸಿದರು.

‘ಮೋದಿ ಕಾ ಗ್ಯಾರಂಟಿ’ ಎಂದು ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಕೇಂದ್ರ ಸರ್ಕಾರ ಕಾಪಿ ಮಾಡಲು ಮುಂದಾಗಿದೆ. ಮೋದಿ ಗ್ಯಾರಂಟಿಗಳ ಮೂಲಕ ಯಾರಿಗೆ ಆಶ್ವಾಸನೆ ಕೊಡಲಾಗುತ್ತಿದೆ ಎನ್ನುವುದನ್ನು ಬಿಜೆಪಿಯವರು ಸ್ಪಷ್ಟಪಡಿಸಬೇಕು. ಬಿಜೆಪಿಗೆ 10 ವರ್ಷಗಳ ಕಾಲ ಜನ ಅಧಿಕಾರ ಕೊಟ್ಟಿದ್ದರೂ ಏನೂ ಮಾಡದೆ ಈಗ ಭರವಸೆ ಕೊಡುತ್ತಿದ್ದಾರೆ ಎಂದು ದೂರಿದರು.

ಈಗ ಮತ್ತೆ ಮೋದಿ ಗ್ಯಾರಂಟಿಗಳ ಮೂಲಕ ಮತ ಕೇಳುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಬರೀ ಸುಳ್ಳಿನ ಗ್ಯಾರಂಟಿ ಕೊಡುತ್ತಿದೆ. ಈ ಹಿಂದೆ ನೀಡಿದ್ದ ಭರವಸೆ ಎಲ್ಲಿ ಹೋಯ್ತು? ಬಿಜೆಪಿ ಅವರ ಮನೆ ದೇವರೇ ಸುಳ್ಳು ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ರಾಜ್ಯದ ತೆರಿಗೆ ಪಾಲಿನ ಅನುದಾನ ಹಂಚಿಕೆ ವಿಚಾರದಲ್ಲೂ ತಾರತಮ್ಯ ಮಾಡಿದೆ. ನಮ್ಮ ರಾಜ್ಯಕ್ಕೆ ಬರಬೇಕಿದ್ದ ಹಣವನ್ನು ಬೇರೆ ರಾಜ್ಯಗಳಿಗೆ ಹಂಚಿದೆ. ಆದ್ದರಿಂದ ರಾಜ್ಯದ ಜನ ಬಿಜೆಪಿ ನಾಯಕರ ಭರವಸೆಗಳನ್ನು ನಂಬಬಾರದು ಎಂದರು.

ಬಡವರಿಗೆ ಕಾರ್ಯಕ್ರಮಗಳನ್ನು ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಮಾತ್ರ. ನೆಹರೂ ಸರ್ಕಾರದಿಂದ ಮನಮೋಹನ್ ಸಿಂಗ್‌ವರೆಗೆ ಎಷ್ಟು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ? ಬಿಜೆಪಿ ಬಡವರ ಪರವಾಗಿ ಒಂದೇ ಒಂದು ಕಾರ್ಯಕ್ರಮ ರೂಪಿಸಿದೆಯೇ? ಯಾವ ಕೆಲಸ ಮಾಡದಿದ್ದರೂ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾನು ಪ್ರಬಲ ಆಕಾಂಕ್ಷಿ

ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಇರುವ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ದೊರೆಯಲಿದೆ. ಈಗಾಗಲೇ ಶಿವಮೊಗ್ಗ ಕ್ಷೇತ್ರದಿಂದ ಗೀತಾ ಶಿವರಾಜ್‌ಕುಮಾರ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ವರಿಷ್ಠರಿಗೆ ಟಿಕೆಟ್ ಕೊಡುವಂತೆ ಕೋರಿದ್ದೇನೆ. ಇತಿಹಾಸವನ್ನು ನೋಡಿದರೆ ಮಹಿಳೆಯರಿಗೆ ರಾಜಕೀಯ ಕೊಟ್ಟಿರುವುದು ಕಾಂಗ್ರೆಸ್. ಮುಂದೆಯೂ ಮಹಿಳೆಯರಿಗೆ ಅಧಿಕಾರ ಕೊಡುವ ಪಕ್ಷ ಕಾಂಗ್ರೆಸ್ ಮಾತ್ರ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net