ನನ್ನದು ಸಿದ್ಧಾಂತದ ರಾಜಕೀಯ

ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಪಿ.ವಿ. ಮೋಹನ್ ಅವರು ದ.ಕ. ಜಿಲ್ಲಾ ಕಾಂಗ್ರೆಸ್ ಅಭಿನಂದನೆಯನ್ನು ಸ್ವೀಕರಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಐವನ್ ಡಿಸೋಜ, ಜೆ.ಆರ್. ಲೋಬೋ, ಶಶಿಧರ್ ಹೆಗ್ಡೆ, ಪದ್ಮರಾಜ್ ಆರ್. ಪೂಜಾರಿ ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಪಿ.ವಿ. ಮೋಹನ್ ಅವರು ದ.ಕ. ಜಿಲ್ಲಾ ಕಾಂಗ್ರೆಸ್ ಅಭಿನಂದನೆಯನ್ನು ಸ್ವೀಕರಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಐವನ್ ಡಿಸೋಜ, ಜೆ.ಆರ್. ಲೋಬೋ, ಶಶಿಧರ್ ಹೆಗ್ಡೆ, ಪದ್ಮರಾಜ್ ಆರ್. ಪೂಜಾರಿ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭಯವೂ ಇದೆ. ಇದರ ನಡುವೆಯೇ ಜನರ ಸೇವೆ ಮಾಡುತ್ತೇನೆ
  • ಕಾಂಗ್ರೆಸ್ ಅಭಿನಂದನೆ ಸ್ವೀಕರಿಸಿದ ಪಿ.ವಿ. ಮೋಹನ್
ಮಂಗಳೂರು: ಈಗಿನ ರಾಜಕೀಯ ಸ್ಥಿತಿಯೇ ಬದಲಾಗಿದೆ. ಹಿಂದಿನಂತಿಲ್ಲ. ಹಾಗಾಗಿ ಸವಾಲು ಇದೆ. ಭಯವೂ ಇದೆ. ಇದರ ನಡುವೆಯೇ ಜನರ ಸೇವೆ ಮಾಡುತ್ತೇನೆ. ಗಾಂಧೀಜಿ, ಅಂಬೇಡ್ಕರ್, ನೆಹರೂ, ಲೋಹಿಯಾ ಅವರ ಸಿದ್ಧಾಂತವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಪಿ.ವಿ. ಮೋಹನ್ ಅವರು ಹೇಳಿದರು.
ಎಐಸಿಸಿ ಕಾರ್ಯದರ್ಶಿಯಾಗಿದ್ದು, ಮೊದಲ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಮೊದಲ ಬಾರಿಗೆ ಶುಕ್ರವಾರ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಅವರು ಪಕ್ಷದ ಅಭಿನಂದನೆಯನ್ನು ಸ್ವೀಕರಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ನನಗೆ ಪಕ್ಷ ತಾಯಿ ಇದ್ದಂತೆ. ಕಾಂಗ್ರೆಸ್ ಕಚೇರಿ ದೇವಸ್ಥಾನವಿದ್ದಂತೆ. ಅಧಿಕಾರದ ಅಹಂಕಾರ ಇರುವುದಿಲ್ಲ. ಹೋರಾಟದ ರಾಜಕಾರಣದಿಂದ ಪಕ್ಷದ ರಾಜಕಾರಣವನ್ನು ಮಾಡಿ ಇದೀಗ ಅಧಿಕಾರದ ರಾಜಕಾರಣಕ್ಕೆ ಧುಮುಕಿದ್ದೇನೆ. ಅಧಿಕಾರವಿಲ್ಲದೆ ಜನರ ಕೆಲಸ ಮಾಡಲಿಕ್ಕೆ ಕಷ್ಟಕರ. ಕಾರ್ಯಕರ್ತರು ಅಧಿಕಾರಕ್ಕಾಗಿ ಹೋರಾಟ ಕಚ್ಚಾಟ ಮಾಡುವುದಲ್ಲ. ಮೊದಲು ಪಕ್ಷಕ್ಕಾಗಿ ದುಡಿಯಬೇಕು. ತ್ಯಾಗ ಮಾಡಬೇಕು ಎಂದರು.

ಎಸ್ಆರ್ ಹಗುರವಾಗಿ ತೆಗೆದುಕೊಳ್ಳಬೇಡಿ

ದ.ಕ. ಜಿಲ್ಲೆಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳನ್ನೂ 2028ರಲ್ಲಿ ಕಾಂಗ್ರೆಸ್ ಗೆಲ್ಲಬೇಕಿದೆ. ಭಾವೈಕ್ಯತೆ, ಸೌಹಾರ್ದ ವಾತಾವರಣವನ್ನು ಗಟ್ಟಿಗೊಳಿಸಬೇಕು. ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಆರ್) ಅನ್ನು ಹಗುರವಾಗಿ ಪರಿಗಣಿಸಬೇಡಿ. ಅದರಿಂದ ಅಪಾಯವಿದೆ. ಹಾಗೆಯೇ ಅವಕಾಶವೂ ಇದೆ. ಅದನ್ನು ಬಳಸಿಕೊಳ್ಳೋಣ. ಜಾಗೃತಿ ಮಾಡಿದರೆ ಸಾಲದು. ತಳಮಟ್ಟಕ್ಕೆ ಇಳಿದು ಮನೆ-ಮನೆಗೆ ಭೇಟಿ ನೀಡಬೇಕು ಎಂದು ಪಿ.ವಿ. ಮೋಹನ್ ಅವರು ಕಾರ್ಯಕರ್ತರನ್ನು ಎಚ್ಚರಿಸಿದರು.

ಪಕ್ಷಕ್ಕಾಗಿ ದುಡಿದಿದ್ದಾರೆ; ಫಲ ಸಿಕ್ಕಿದೆ

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಮಾತನಾಡಿ, ಪರಿಷತ್ ಚುನಾವಣೆಯಲ್ಲಿ ಮೊದಲ ಪ್ರಶಸ್ತ್ಯದ ಮತದಲ್ಲೇ ಮೊದಲ ಅಭ್ಯರ್ಥಿಯಾಗಿ ಜಯಗಳಿಸಿದ್ದ ಪಿ.ವಿ. ಮೋಹನ್ ಅವರದ್ದು ಹೋರಾಟದ ಬದುಕು. ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಕಾರ್ಯಕರ್ತರಾಗಿ ಪಕ್ಷಕ್ಕಾಗಿ ಶ್ರಮಪಡುತ್ತಿದ್ದರು. ಕೇರಳ ಚುನಾವಣೆಯಲ್ಲೂ ಶ್ರಮಿಸಿದ್ದರು. ಇದನ್ನು ಗಮನಿಸಿದ ನಮ್ಮ ಹೈಕಮಾಂಡ್ ಅಚ್ಚರಿಯ ಆಯ್ಕೆ ಮಾಡಿದೆ. ತೊಡಗಿಸಿಕೊಳ್ಳುವಿಕೆ ಮತ್ತು ಬದ್ಧತೆಯ ಅವರು ಪಕ್ಷದ ಬೆಳವಣಿಗೆಗೆ ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಜೆ.ಆರ್. ಲೋಬೋ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಪಕ್ಷದ ಮುಖಂಡರುಗಳಾದ ಪದ್ಮರಾಜ್ ಆರ್. ಪೂಜಾರಿ, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ವಿಶ್ವಾಸದಾಸ್, ಉಸ್ಮಾನ್, ಅಪ್ಪಿ, ಸುಭಾಷ್, ಡೆನ್ನಿಸ್, ನವಾಜ್, ಶುಭೋದಯ, ಜೇಬಾ, ಚಿತ್ತರಂಜನ್, ಜೋಕಿಂ, ದಿನೇಶ್, ಮನೋರಾಜ್ ಉಪಸ್ಥಿತರಿದ್ದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net