

ತಿ.ನರಸೀಪುರ: ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳ ಮೂಲಕ ಸ್ವಚ್ಛತೆಗೆ ಶ್ರಮಿಸುವ ಕಾಲೇಜಿನ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಕೊಳತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ.ರವಿಪ್ರಸಾದ್ ಹೇಳಿದರು.
ತಾಲೂಕಿನ ಕೊಳತ್ತೂರು ಗ್ರಾಮದಲ್ಲಿ ಶುಕ್ರವಾರ ಪೂರೀಗಾಲಿ ಗ್ರಾಮದ ಪಿಎಲ್‌ಎನ್ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಆಯೋಜಿಸಿದ್ದ ನನ್ನ ಭಾರತಕ್ಕಾಗಿ ಯುವ ಜನತೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿ, ಪದವಿ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳಿಗೆ ವ್ಯಾಸಂಗದ ಅವಧಿಯಲ್ಲಿ ವಾರಗಳ ಕಾಲ ಸ್ವಚ್ಛತೆಗಾಗಿ ಶ್ರಮಿಸುವ ಅವಕಾಶ ಇರುವ ವಾರ್ಷಿಕ ವಿಶೇಷ ಶಿಬಿರಗಳು ಸೇವಾ ಮನೋಭಾವ ವೃದ್ಧಿಗೆ ಸಹಕಾರಿಯಾಗಲಿವೆ. ಇವರಿಂದ ಗ್ರಾಮೀಣ ಜನರಲ್ಲಿ ಸ್ವಚ್ಛತೆಯ ಅರಿವು ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ಮಳವಳ್ಳಿ ತಾಲೂಕಿನ ಪೂರೀಗಾಲಿ ಗ್ರಾಮದ ಹಲವು ದಶಕಗಳಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸ್ಥಳೀಯವಾಗಿ ಪದವಿ ಶಿಕ್ಷಣವನ್ನು ನಿರಂತರವಾಗಿ ಪಿಎಲ್‌ಎನ್ ಕಾಲೇಜು ನೀಡುತ್ತಿದೆ. ಕೊಳತ್ತೂರು ಗ್ರಾಮದಲ್ಲಿಯೂ ಹಲವು ವರ್ಷಗಳ ಕಾಲ ವಾರ್ಷಿಕ ಸೇವಾ ಶಿಬಿರಗಳನ್ನ್ನು ಆಯೋಜಿಸಿ ಗ್ರಾಮದ ನೈರ್ಮಲ್ಯ ಕಾಪಾಡಲಾಗುತ್ತಿದೆ. ಶಿಬಿರದ ಯಶಸ್ಸಿಗೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಶಿಬಿರಾಧಿಕಾರಿ, ಉಪನ್ಯಾಸಕ ಡಾ.ಎಸ್.ಶಾಂತನಾಗರಾಜು ಮಾತನಾಡಿ, ತಾಲೂಕು ಕೇಂದ್ರದಿಂದ ದೂರದಲ್ಲಿರುವ ಕೊಳತ್ತೂರು ಗ್ರಾಮ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಗ್ರಾಮದಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆ ನಿರ್ವಹಣೆಯ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಏ.25 ರಿಂದ ಮೇ 1 ರವರೆಗೂ ಹಮ್ಮಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಬುದ್ಧ ವಿಹಾರದ ಸುಗತ ಪಾಲ್ ಬಂತೇಜಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಕುಮಾರಸ್ವಾಮಿ, ಕೆ.ಟಿ.ನಂಜುಂಡಸ್ವಾಮಿ, ಅಭಿವೃದ್ಧಿ ಅಧಿಕಾರಿ ಬಿ.ಎಲ್.ಶ್ರೀನಿವಾಸ್ ಮೂರ್ತಿ, ಜಾನಪದ ಗಾಯಕ ಪಿ.ಮಹದೇವಸ್ವಾಮಿ, ಮುಖಂಡ ನಾಗೇಶ, ಉಪನ್ಯಾಸಕರಾದ ನಾಗಮಾದಯ್ಯ, ಡಿ.ರಾಮು, ರಮೇಶ್, ಶಿಬಿರಾರ್ಥಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.