

ಕೆ.ಆರ್.ಸಾಗರ: ಬೆಳಗೊಳ-ಮಜ್ಜಿಗೆಪುರ ಗ್ರಾಮದ ಬಳಿಯ ಎಡಮುರಿ ಪ್ರವಾಸಿತಾಣದ ದೇವರಾಯ ಅಣೆಕಟ್ಟೆಯಲ್ಲಿ ವಿ. ಫಾರ್ಮ್ ಪವರ್ ಕಂ. (ಪ್ರೈ) ಲಿಮಿಟೆಡ್ ತೆರೆಯಲು ಹೊರಟಿದ್ದ 0.5 ಮೆ.ವಾ ಸಾಮರ್ಥ್ಯದ ಕಿರು ಜಲ ವಿದ್ಯುತ್ ಯೋಜನೆಯನ್ನು ಇಂಧನ ಇಲಾಖೆ ಅಧೀನ ಕಾರ್ಯದರ್ಶಿ ವಿನೋದ್ ಕುಮಾರ್ ರದ್ದು ಪಡಿಸಿ ಆದೇಶಿಸಿದೆ.
ವಿ. ಫಾರ್ಮ್ ಪವರ್ ಪ್ರೈ. ಲಿಮಿಟೆಡ್ ಕಂಪನಿಗೆ ಹಂಚಿಕೆಯಾಗಿದ್ದ 0.5 ಮೆ.ವಾ ಸಾಮರ್ಥ್ಯದ ಕಿರು ಜಲ ವಿದ್ಯುತ್ ಯೋಜನೆ ಇದುವರೆಗೂ ಅನುಷ್ಠಾನಗೊಂಡಿರುವುದಿಲ್ಲ ಹಾಗೂ ಕಾಲಾವಕಾಶ ಶುಲ್ಕ ಪಾವತಿಸದ ಕಾರಣ ಕಿರು ಜಲ ವಿದ್ಯುತ್ ಯೋಜನೆಯನ್ನು ಸರ್ಕಾರ ರದ್ದು ಪಡಿಸಿರುವುದನ್ನು ಕಾಂಗ್ರೆಸ್ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಾಗೂ ಪರಿಸರ ಪ್ರಿಯರು ಸ್ವಾಗತಿಸಿದ್ದಾರೆ.
ಈ ಹಿಂದೆ ಪಕ್ಷಾತೀತವಾಗಿ ಕಾಂಗ್ರೆಸ್ ಮುಖಂಡರಾದ ಬೆಳಗೊಳ ಗ್ರಾ.ಪಂ ಅಧ್ಯಕ್ಷ ಬಿ.ವಿ ಸುರೇಶ್, ತಾ.ಪಂ ಮಾಜಿ ಸದಸ್ಯ ಮೇಟಗಳ್ಳಿ ಸ್ವಾಮೀಗೌಡ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಬೆಳಗೊಳ ಮಂಜುನಾಥ್, ಭಾರ್ಗವ, ಪುಟ್ಟೇಗೌಡ ಸೇರಿದಂತೆ ಬೆಳಗೊಳ, ಮಜ್ಜಿಗೆಪುರ ಗ್ರಾಮಸ್ಥರು ಕಂಪನಿ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು.
ಕಾವೇರಿ ನದಿಯಲ್ಲಿ ವಿ.ಫಾರ್ಮ್ ಪವರ್ ಕಂಪನಿ ಗಡಿ ಗುರುತಿಸದೆ, ಅಕ್ರಮವಾಗಿ ಪವರ್ ಪ್ಲಾಂಟ್ ನಿರ್ಮಿಸಲು ತಡೆಗೋಡೆ ನಿರ್ಮಿಸುತ್ತಿದೆ. ಜತೆಗೆ ಎಡಮುರಿ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇಲ್ಲಿ ನೂರಾರು ವರ್ಷಗಳ ಇತಿಹಾಸವಿದೆ. ಅನೇಕ ಪ್ರಭೇದದ ಪ್ರಾಣಿ, ಪಕ್ಷಿಗಳ ಸಂತತಿ ಇದ್ದು, ಇಕೋ ಜೋನ್ ಎಂದು ಘೋಷಣೆಯಾಗಿದೆ. ಈಗಿದ್ದರೂ ಏಕಾಏಕಿ ತಡೆಗೋಡೆ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಇದನ್ನು ಪ್ರಶ್ನಿಸಿದವರ ವಿರುದ್ಧ ಜಾತಿ ನಿಂದನೆ ಆರೋಪ ಹೊರಿಸಿ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡುವ ಪ್ರವೃತ್ತಿ ಹೆಚ್ಚಾಗಿದೆ. ಜತೆಗೆ ಅರಣ್ಯ ಇಲಾಖೆ ಸಹ ಈ ಸ್ಥಳವನ್ನು ದೇವರಾಜ ದ್ವೀಪಗಳು ಎಂದು ಗುರುತಿಸಿ ಅತಿಕ್ರಮ ಪ್ರವೇಶಿಸದಂತೆ ಎಚ್ಚರಿಕಾ ನಾಮಫಲಕಗಳನ್ನು ಅಳವಡಿಸಿದೆ. ಇಂತಹ ಸಂರಕ್ಷಣಾ ಜಾಗದಲ್ಲಿ ಅವೈಜ್ಞಾನಿಕವಾಗಿ ನದಿಯಲ್ಲಿ ಕೆಲಸ ಮಾಡುತ್ತಿರುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುವಂತೆ ಆಗ್ರಹಿಸಿದ್ದರು.