

ಕಾರ್ಕಳ: ಮುಂಡ್ಲಿ ಕಿಂಡಿಅಣೆಕಟ್ಟು ಗೇಟ್ ಕಾಮಗಾರಿ ಸ್ಥಗಿತಗೊಳಿಸುವಂತೆ ನೀರು ಸರಬರಾಜು ಕೇಂದ್ರದ ಮಿನಿ ಹೈಡ್ರೋ ಪ್ರಾಜೆಕ್ಟ್ ಸಂಸ್ಥೆಗೆ ಕಾರ್ಕಳ ಪುರಸಭೆ ಸೂಚಿಸಿದೆ.
ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಅಧ್ಯಕ್ಷೆ ಸುಮಾಕೇಶವ್, ಇಂಜಿನಿಯರ್ ಸೋಮಶೇಖರ್, ಪುರಸಭೆ ಸದಸ್ಯ ಯೋಗೀಶ್ ದೇವಾಡಿಗ, ದುರ್ಗ ಗ್ರಾಪಂ ಅಧ್ಯಕ್ಷ ಸತೀಶ್ ನಾಯಕ್, ಶಿರ್ಲಾಲು ಗ್ರಾಪಂ ಅಧ್ಯಕ್ಷ ರಮಾನಂದ ಪೂಜಾರಿ, ಸಾಮಾಜಿಕ ಕಾರ್ಯಕರ್ತ ರಾಜೇಂದ್ರ ಕುಮಾರ್ ಮುಂಡ್ಲಿ ಜಲಾಶಯದ ಜಲವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೈಡ್ರೋಲಿಕ್ ಗೇಟ್ ಅಳವಡಿಕೆಯ ಅಧಿಕಾರಿಗಳ ಜತೆ ಚರ್ಚಿಸಿದರು.
ಕಾರ್ಕಳ ಪುರಸಭೆ ವ್ಯಾಪ್ತಿಗೆ ಸಮಗ್ರ ಕುಡಿಯುವ ನೀರಿನ ಮೂಲವಾದ ಮುಂಡ್ಲಿ ಹೊಳೆಯಲ್ಲಿ ಮಳೆಗಾಲದಲ್ಲಿ ನೀರಿನ ಒಳ ಹರಿವು ಹೆಚ್ಚುತ್ತದೆ. ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಗೇಟ್ ತೆರವುಗೊಳಿಸುವುದು ವಿಳಂಬವಾಗುವುದರಿಂದ ಡ್ಯಾಂ ಹಿಂದಿನ ಜಮೀನುಗಳು ನೀರಿನಿಂದ ಜಲಾವೃತವಾಗಿ ಕೃಷಿ ನಷ್ಟವಾಗುತ್ತದೆ. ಮಳೆಗಾಲ ಪ್ರಾರಂಭ ಆಗಲಿರುವುದರಿಂದ ಗೇಟ್ ಕಾಮಗಾರಿ ಸ್ಥಗಿತಗೊಳಿಸಿ ಮಳೆಗಾಲದ ನಂತರ ಮುಂದುವರಿಸಲು ಪುರಸಭೆ ಅಧಿಕಾರಿಗಳು ಸೂಚಿಸಿದರು. ಈ ಬಗ್ಗೆ ದುರ್ಗ ಗ್ರಾಪಂ ವತಿಯಿಂದ ಪುರಸಭೆಗೆ ಮನವಿ ಕೂಡ ನೀಡಲಾಗಿತ್ತು.
ಪರವಾನಗಿ ನವೀಕರಿಸದ ಆರೋಪ
ದುರ್ಗ ಗ್ರಾಮದ ಸ್ವರ್ಣ ಹೊಳೆಗೆ ತಾಗಿಕೊಂಡು ಜಿವಿಆರ್ ಪವರ್ ಪ್ರಾಜೆಕ್ಟ್ ಕಂಪನಿ ಜಲವಿದ್ಯುತ್ ಸ್ಥಾವರವನ್ನು ಕಾನೂನು ಬಾಹಿರವಾಗಿ ನಡೆಸುತ್ತಿದೆ. ಪರವಾನಗಿ ನವೀಕರಿಸದೆ 2 ವರ್ಷವಾಗಿದೆ. ಅವಧಿ ಮುಗಿದಿದ್ದರೂ ಜಿಲ್ಲಾಧಿಕಾರಿ ಅನುಮತಿ ಪತ್ರವಿದೆ ಎಂದು ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ಕಂಪನಿ ವಂಚಿಸುತ್ತಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಈ ಭಾಗದ 12ಕ್ಕೂ ಅಧಿಕ ಮನೆಗಳು ಹಾಗೂ ಕೃಷಿ ಭೂಮಿಗೆ ಹಾನಿಯಾಗುತ್ತಿದೆ. ಪರಿಹಾರ ಕೂಡ ನೀಡುತ್ತಿಲ್ಲ. ಕಾನೂನು ಬಾಹಿರವಾಗಿ ನಡೆದುಕೊಂಡಿರುವುದಕ್ಕೆ ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳಿವೆ. ಪವರ್ ಪ್ರಾಜೆಕ್ಟ್ ಕೆಲಸವನ್ನು ಶಾಶ್ವತವಾಗಿ ನಿಲ್ಲಿಸುವುದು ಸೂಕ್ತ. ಜತೆಗೆ ಕೃಷಿಕರಿಗೆ ಮಳೆಗಾಲದಲ್ಲಿ ಆಗುವ ನಷ್ಟವನ್ನು ಕಂಪನಿ ಭರಿಸಬೇಕೆಂದು ದುರ್ಗ ಗ್ರಾಪಂ ಅಧ್ಯಕ್ಷ ಸತೀಶ್ ನಾಯಕ್ ಒತ್ತಾಯಿಸಿದ್ದಾರೆ.