

ಬೆಂಗಳೂರು: ಕರೊನಾ ಸೋಂಕು ಪೀಡಿತನಿಗೆ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲು ಬಿಬಿಎಂಪಿ ಅಧಿಕಾರಿಗಳು ಹೋದಾಗ ಹೈಡ್ರಾಮಾ ನಡೆದಿದೆ.
ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿನ ಡಾ. ವೇಣು ಹೆಲ್ತ್ ಕೇರ್ ಸೆಂಟರ್ನಲ್ಲಿ ಬುಧವಾರ ಬಿಹಾರ ಮೂಲದ 54 ವರ್ಷದ ಕಟ್ಟಡ ಕಾರ್ವಿುಕ ಎದೆನೋವು ಎಂದು ಚಿಕಿತ್ಸೆಗೆ ಹೋಗಿದ್ದ. ಆಸ್ಪತ್ರೆ ವೈದ್ಯ ಡಾ. ವೇಣುಗೋಪಾಲ್, ರೋಗಿಗೆ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಜಯದೇವ ಆಸ್ಪತ್ರೆಗೆ ಕಳುಹಿಸಿದ್ದರು.
ಅಲ್ಲಿನ ವೈದ್ಯರು ಪರೀಕ್ಷೆ ನಡೆಸದೆ ವಿಕ್ಟೋರಿಯಾ ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ರವಾನಿಸಿದ್ದರು. ಕೋವಿಡ್- 19 ಪರೀಕ್ಷೆ ನಡೆಸಿದಾಗ ಕಾರ್ವಿುಕನಿಗೆ ಸೋಂಕು ದೃಢಪಟ್ಟಿದೆ. ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಮತ್ತು ವೈದ್ಯರು, ಕರೊನಾ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಪಡೆದು ಡಾ. ವೇಣು ಹೆಲ್ತ್ ಕೇರ್ ಸೆಂಟರ್ ಸೀಲ್ಡೌನ್ ಮಾಡಲು ಹೋಗಿದ್ದಾರೆ. ವಿಷಯ ತಿಳಿದ ಡಾ. ವೇಣುಗೋಪಾಲ್, ಆಸ್ಪತ್ರೆ ಬಾಗಿಲು ಲಾಕ್ ಮಾಡಿಕೊಂಡು ಕ್ವಾರಂಟೈನ್ಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಎಷ್ಟೇ ಮನವರಿಕೆ ಮಾಡಿದರೂ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಬಾಗಿಲು ತೆಗೆದಿಲ್ಲ.
ಕೊನೆಗೆ ಎರಡು ತಾಸಿನ ಬಳಿಕ ಡೋರ್ ಒಡೆದು ಒಳಪ್ರವೇಶ ಮಾಡಿ ವೈದ್ಯರು ಮತ್ತು ಸಿಬ್ಬಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಿ ಆಸ್ಪತ್ರೆಯನ್ನು ಸೀಲ್ಡೌನ್ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಪುಲಿಕೇಶಿನಗರದಲ್ಲಿಯೂ ಬಂದ್
ಕರೊನಾ ಸೋಂಕಿನ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಪುಲಿಕೇಶಿನಗರದ ಖಾಸಗಿ ಆಸ್ಪತ್ರೆ ವೈದ್ಯರು ಮತ್ತು ನರ್ಸ್ಗೂ ಸೋಂಕು ತಗುಲಿದೆ. ಅದಕ್ಕಾಗಿ ಆಸ್ಪತ್ರೆಯನ್ನು ಸಂಪೂರ್ಣ ಸೀಲ್ಡೌನ್ ಮಾಡಿ ಸುತ್ತಲ ಪ್ರದೇಶದಲ್ಲಿ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.