

ಬಂಗಾರಪೇಟೆ: ತಾಲೂಕು ಕಚೇರಿಯಲ್ಲಿ ಇಬ್ಬರು ತಹಸೀಲ್ದಾರ್ಗಳ ಮಧ್ಯೆ ಕುರ್ಚಿಗಾಗಿ ಶನಿವಾರ ಹೈಡ್ರಾಮಾವೇ ನಡೆದಿದೆ. ತಾಲೂಕಿನಿಂದ ವರ್ಗಾವಣೆಯಾಗಿದ್ದ ಎಸ್.ವೆಂಕಟೇಶಪ್ಪ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ಈ ಮಧ್ಯೆ ನೇಮಕವಾದ ನೂತನ ತಹಸೀಲ್ದಾರ್ ಸುಜಾತಾ ಮಧ್ಯೆ ಕುರ್ಚಿ ಫೈಟ್ ಏರ್ಪಟ್ಟಿದೆ. ಸದ್ಯ ಕುರ್ಚಿ, ಕಾರ್ ದುರುಪಯೋಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಡಿ.31ರಂದು ಬಂಗಾರಪೇಟೆ ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಅವರನ್ನು ಜಿಲ್ಲಾಧಿಕಾರಿ ಕಚೇರಿಯ ಪುರಸಭಾ ತಹಸೀಲ್ದಾರ್ ಹುದ್ದೆಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿತ್ತು. ತೆರವಾದ ಸ್ಥಾನಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಜರಾಯಿ ತಹಸೀಲ್ದಾರರಾಗಿದ್ದ ಕೆ.ಎನ್ ಸುಜಾತಾ ಅವರನ್ನು ನೇಮಕ ಮಾಡಿ ಎಂದು ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಮುಕ್ತಾರ್ಪಾಷಾ ಆದೇಶ ಹೊರಡಿಸಿದ್ದರು. ಆದರೆ, ವರ್ಗಾವಣೆಯನ್ನು ಪ್ರಶ್ನಿಸಿ ಕೆಎಟಿಗೆ ತರಳಿದ್ದ ವೆಂಕಟೇಶಪ್ಪಗೆ ಶುಕ್ರವಾರ ತಡೆಯಾಜ್ಞೆ ಸಿಕ್ಕಿದೆ. ಹಾಗಾಗಿ ತಡೆಯಾಜ್ಞೆ ಆದೇಶ ಪ್ರತಿಯೊಂದಿಗೆ ಬಂಗಾರಪೇಟೆ ತಾಲೂಕು ಕಚೇರಿಗೆ ಶನಿವಾರ ಹಾಜರಾದರು. ಆದರೆ ತಾಲೂಕು ಕಚೇರಿಯ ತಹಸೀಲ್ದಾರ್ ಕೊಠಡಿ ಮತ್ತು ಸಭಾಂಗಣಕ್ಕೆ ಬೀಗ ಜಡಿಯಲಾಗಿತ್ತು. ಇದರಿಂದ ವಿಚಲಿತರಾದ ವೆಂಕಟೇಶಪ್ಪ ಬೇರೊಂದು ಕೊಠಡಿಯಲ್ಲಿ ಕೂತರು. ನೂತನ ತಹಸೀಲ್ದಾರ್ ಸುಜಾತಾ ತಾಲೂಕು ಕಚೇರಿಗೆ ಆಗಮಿಸಿ ಕಚೇರಿಯ ಬೀಗ ತೆರೆದು ಆಸನದಲ್ಲಿ ಕೂತರು.
ತಹಸೀಲ್ದಾರ್ಗಳ ಮಧ್ಯೆ ಜಗಳ: ಈ ಮಧ್ಯೆ, ವೆಂಕಟೇಶಪ್ಪ ಹಾಗೂ ತಹಸೀಲ್ದಾರ್ ಸುಜಾತಾ ನಡುವೆ ತಹಸೀಲ್ದಾರ್ ಕೊಠಡಿಯ ಕುರ್ಚಿಗಾಗಿ ಜಗಳವೇ ನಡೆಯಿತು. ಕೆಲಕಾಲ ಕಚೇರಿಯಲ್ಲಿ ಹೈಡ್ರಾಮವೂ ನಡೆಯಿತು.
ಹೊಂದಾಣಿಕೆ ಕೊರತೆ: 5 ತಿಂಗಳ ಹಿಂದೆಯಷ್ಟೇ ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಅವರನ್ನು ತಾಲೂಕಿಗೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹಾಕಿಸಿಕೊಂಡು ಬಂದಿದ್ದರು. ಆರಂಭದಲ್ಲಿ ಇಬ್ಬರೂ ಚೆನ್ನಾಗಿದ್ದರಾದರೂ ನಂತರದ ದಿನಗಳಲ್ಲಿ ಶಾಸಕ ಹಾಗೂ ತಹಸೀಲ್ದಾರರ ನಡುವೆ ಹೊಂದಾಣಿಕೆ ಕೊರತೆ ಉಂಟಾಗಿತ್ತು.
ಕಾರು ಕಳವು ಪ್ರಕರಣ: ಜಿಲ್ಲಾಧಿಕಾರಿಗಳಿಂದ ವರ್ಗಾವಣೆ ಹಾಗೂ ರಿಲೀವಿಂಗ್ ಲೆಟರ್ ನೀಡಿದರೆ ನಾನು ವಾಪಸ್ ತೆರಳುವೆ. ಈ ಸಂಬಂಧ ಯಾವುದೇ ಆದೇಶ ಮೇಲಧಿಕಾರಿಗಳಿಂದ ಬಂದಿಲ್ಲ. ಆದ್ದರಿಂದ, ನಾನು ಎಲ್ಲಿಗೂ ಹೋಗಲ್ಲ. ನನ್ನ ವಾಹನವನ್ನು ವರ್ಗಾವಣೆಗೊಂಡಿರುವ ತಹಸೀಲ್ದಾರ್ ವೆಂಕಟೇಶಪ್ಪ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣದ ದೂರು ನೀಡುವೆ ಎಂದು ತಹಸೀಲ್ದಾರ್ ಸುಜಾತಾ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಅಂತೆಯೇ, ಪಟ್ಟಣ ಠಾಣೆಯಲ್ಲಿ ತಹಸೀಲ್ದಾರ್ ವೆಂಕಟೇಶಪ್ಪ ಹಾಗೂ ಡ್ರೈವರ್ ನಾಗೇಶ್ ವಿರುದ್ಧ ದೂರು ದಾಖಲಾಗಿದೆ.
ಅವಧಿಗೂ ಮುಂಚೆಯೇ ವರ್ಗಾವಣೆ ಮಾಡಿದ ಕಾರಣ ನನಗೆ ಅನ್ಯಾಯ ಆಗಿತ್ತು. ವರ್ಗಾವಣೆ ಆದೇಶದ ವಿರುದ್ಧ ಕರ್ನಾಟಕ ಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಿದ್ದರಿಂದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು, ಕೆಲಸಕ್ಕೆ ಹಾಜರಾಗಿದ್ದೇನೆ. ಮುಂದೆ ಜಿಲ್ಲಾಧಿಕಾರಿ ಆದೇಶದಂತೆ ಕಾರ್ಯ ನಿರ್ವಹಿಸುತ್ತೇನೆ. - ಎಸ್.ವೆಂಕಟೇಶಪ್ಪ, ತಹಸೀಲ್ದಾರ್ ತಹಸೀಲ್ದಾರ್ ವೆಂಕಟೇಶಪ್ಪಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಿಕ್ಕಿದ್ದರೆ ಅದನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಸರ್ಕಾರದ ಆದೇಶದಂತೆ ಮುಂದೆ ಜಿಲ್ಲಾಧಿಕಾರಿಗಳ ರಿಲೀವಿಂಗ್ ಪತ್ರ ತಂದು ಕೆಲಸಕ್ಕೆ ಹಾಜರಾಗಬೇಕು. ಆದರೆ, ಕಾನೂನು ಬಾಹಿರವಾಗಿ ಕಚೇರಿಗೆ ಆಗಮಿಸಿದ್ದಾರೆ. ಆತನ ವಿರುದ್ಧ ದುರ್ನಡತೆ ಲಂಚಗುಳಿತನ ಸೇರಿ ಬಹಳಷ್ಟು ದೂರು ಬಂದಿದ್ದು, ಅದರಂತೆ ಸರ್ಕಾರ ವರ್ಗಾವಣೆ ಮಾಡಿದೆ. ಕಾರು ದುರ್ಬಳಕೆ ಬಗ್ಗೆ ಠಾಣೆಯಲ್ಲಿ ದೂರು ನೀಡಲಾಗಿದ್ದು, ಚಾಲಕ ಟೆಂಪರ್ವರಿ ಆಗಿದ್ದು, ಆತನನ್ನು ಕೆಲಸದಿಂದ ತೆಗೆಯಲು ಕ್ರಮ ಕೈಗೊಳ್ಳಲಾಗುತ್ತದೆ. - ಎಸ್.ಎನ್.ನಾರಾಯಣಸ್ವಾಮಿ, ಶಾಸಕ