ಒತ್ತುವರಿ ತೆರವು ವೇಳೆ ಹೈಡ್ರಾಮಾ

Hydrama during evacuation
ತಾಳಿಕೋಟೆ ಬಸ್ ನಿಲ್ದಾಣದ ಮುಂಭಾಗದ ಡಬ್ಬಾ ಅಂಗಡಿಗಳ ತೆರವುಗೊಳಿಸುತ್ತಿದ್ದಾಗ ಮಹಿಳೆಯರು ಜೆಸಿಬಿ ಯಂತ್ರದ ತೆಳಗಡೆ ಕುಳಿತು ಪ್ರತಿಭಟನೆ ನಡೆಸಿದರು.
Published on

ತಾಳಿಕೋಟೆ: ಪಟ್ಟಣದ ಪುರಸಭೆ ವ್ಯಾಪ್ತಿಯ ಫುಟ್‌ಪಾತ್ ಸೇರಿ ವಿವಿಧೆಡೆ ಎರಡನೇ ದಿನ ಒತ್ತುವರಿ ತೆರವುಗೊಳಿಸುವಾಗ ಕೆಲವು ಅಂಗಡಿಕಾರರು-ಅಧಿಕಾರಿಗ ವಾಗ್ವಾದ, ಕೋರ್ಟ್ ಆದೇಶದಿಂದ ಹೈಡ್ರಾಮಾ ನಡೆಯಿತು.

ಬುಧವಾರದ ಕಾರ್ಯಾಚರಣೆಯಲ್ಲಿ ಶಿವಾಜಿ ಮಹಾರಾಜ್ ವೃತ್ತದ ಎಡಬಲ ಒತ್ತುವರಿ ತೆರವುಗೊಳಿಸಲಾಯಿತು. ಬಸ್ ನಿಲ್ದಾಣದ ಮುಂಭಾಗದ ಹರಳಯ್ಯ ಸಮಾಜದ ಅಂಗಡಿಕಾರರು ತೆರವಿಗೆ ವಿರೋಧಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಿ ಸ್ಥಳದಲ್ಲಿಯೆ ಧರಣಿ ಆರಂಭಿಸಿ, ಜೆಸಿಬೆ ಮೇಲೆ, ಕೆಳಗೆ, ಎದುರು ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಬಳಿ ದಾಖಲೆಗಳು ಇದ್ದರೆ ತೋರಿಸಿರಿ, ಇಲ್ಲ ಅಂಗಡಿಗಳನ್ನು ತೆಗೆಯಿರಿ ಎಂದು ಅಧಿಕಾರಿಗಳು ಹೇಳಿದಾಗ ಅಂಗಡಿಕಾರರು ಸಮಯ ಅವಕಾಶದೊಂದಿಗೆ ಸ್ವತಃ ಅಂಗಡಿ ತೆರವಿಗೆ ಮುಂದಾದರು. ಏತ್ಮಧ್ಯೆ, ಗುಲಬರ್ಗಾ ಉಚ್ಚನ್ಯಾಯಾಲಯವು ಸದರಿ ಬಸ್ ನಿಲ್ದಾಣದ ಮುಂದುಗಡೆಯ 23 ಅಂಗಡಿಗಳ ತೆರವು ಕಾರ್ಯಚರಣೆಗೆ ತಡೆಯಾಜ್ಞೆ ನೀಡಿ, ಡಿ.11ರ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ಮಾಡಿದ ಪ್ರತಿಯನ್ನು ಅಂಗಡಿಕಾರರು ಅಧಿಕಾರಿಗಳಿಗೆ ತಂದುಕೊಟ್ಟಾಗ ಕಾರ್ಯಚರಣೆ ನಿಲ್ಲಿಸಿ ಸಿಬ್ಬಂದಿಯೊಂದಿಗೆ ಹಿಂದಿರಿಗಿದರು.

ಪ್ರತಿಭಟನೆ ವೇಳೆ ಮಾತನಾಡಿದ ಹರಳಯ್ಯ ಸಮಾಜದ ಮುಖಂಡ ರಾಘವೇಂದ್ರ ವಿಜಾಪೂರ ಅವರು, ಪುರಸಭೆ ಅಧಿಕಾರಿಗಳು ದಲಿತರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಡಬ್ಬಾ ಅಂಗಡಿಗಳ ಮೇಲೆ ಜೀವನ ಸಾಗಿಸುತ್ತಿದ್ದೇವೆ. ತೆರವುಗೊಳಿಸಲು ಸಮಯ ಅವಕಾಶ ಕೇಳಿದರೂ ಅವಕಾಶ ನೀಡದೆ ತೆರವುಗೊಳಿಸಿದ್ದಾರೆ. ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರ ಬಗ್ಗೆ ಹೇಳಿದರೂ ಆದೇಶ ಪ್ರತಿಬೇಕೆಂದರು. ಆದೇಶ ಪ್ರತಿ ತಂದುಕೊಡುವಷ್ಟರಲ್ಲಿಯೇ ಎಲ್ಲ ಅಂಗಡಿ ತೆರವುಗೊಳಿಸಿ ನಮ್ಮ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಹೀಗಾಗಿ ನಮಗೆ ನ್ಯಾಯ ಸಿಗುವವರೆಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದರು.

ಹರಳಯ್ಯ ಸಮಾಜದ ಮುಖಂಡರಾದ ರಾಘು ವಿಜಾಪೂರ, ಲಕ್ಷ್ಮ್ಮಣ ವಿಜಾಪೂರ, ಕೃಷ್ಣಾ ಮಬ್ರುಮಕರ, ಚಂದ್ರಶೇಖರ ವಿಜಾಪೂರ, ರಾಜು ವಿಜಾಪೂರ, ಕಾಶಿನಾಥ ಮಬ್ರುಮಕರ, ಜಗದೀಶ ವಿಜಾಪೂರ, ಪರಶುರಾಮ ವಿಜಾಪೂರ, ರಾಮಕೃಷ್ಣ ವಿಜಾಪೂರ, ಬಸವರಾಜ ವಿಜಾಪೂರ, ಗೋಪಾಲ ವಿಜಾಪೂರ, ನಾಗರಾಜ ವಿಜಾಪೂರ, ಮದರೆಮ್ಮ ಫೀರಪ್ಪ ವಿಜಾಪೂರ, ಸೌಮ್ಯಾ ವಿಜಾಪೂರ, ಸುನಂದಾ ವಿಜಾಪೂರ, ಪ್ರೀಯಾ ಮಬ್ರುಮಕರ, ನಾಗಮ್ಮ ವಿಜಾಪೂರ, ಯಮನವ್ವ ವಿಜಾಪೂರ, ನೀಲಮ್ಮ ದುತ್ತರಗಿ, ಮಂಜುಳಾ ಬೆನಕನಹಳ್ಳಿ, ಮತ್ತು ಶೌಕತ್ ಲಾಹೋರಿ, ವನ ಅಗರವಾಲಾ, ಅಬ್ದುಲ್ ರಮೇಮಾನ ಹುಣಶ್ಯಾಳ ಇದ್ದರು.

ದಲಿತರ ಮೇಲೆ ಶಾಸಕರ ದೌರ್ಜನ್ಯ

ಮುದ್ದೇಬಿಹಾಳ ಪಟ್ಟಣದಲ್ಲಿ ಡಬ್ಬಾ ಅಂಗಡಿ, ಗೂಡಂಗಡಿಗಳನ್ನು ಇಟ್ಟುಕೊಂಡು ಉಪಜೀವನ ಸಾಗಿಸುತ್ತಿದ್ದ ಬಡವರ ಹಾಗೂ ದಲಿತರ ಮೇಲೆ ದೌರ್ಜನ್ಯ ವೆಸಗಿ ಅವರ ಅಂಗಡಿಗಳನ್ನು ತೆರವುಗೊಳಿಸಿ ಅವರ ಹೊಟ್ಟೆಯ ಮೇಲೆ ಹೊಡೆಯುವಂತಹ ಕಾರ್ಯ ಶಾಸಕ ಸಿ.ಎಸ್. ನಾಡಗೌಡ(ಅಪ್ಪಾಜಿ) ಅವರು ಮಾಡಿದ್ದಾರೆಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಹೇಳಿದ್ದಾರೆ.

ಅತೀಕ್ರಮಣ ತೆರವು ಕಾರ್ಯಚರಣೆಗೆ ಸಂಬಂಧಿಸಿ ದೂರವಾಣಿಯ ಮೂಲಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಾಳಿಕೋಟೆಯಲ್ಲಿ ಹರಳಯ್ಯ ದಲಿತ ಸಮಾಜದವರು 40 ವರ್ಷಗಳಿಂದ ಪಾದರಕ್ಷೆಗಳನ್ನು ತಯಾರಿಕೆ ಮಾಡುತ್ತಾ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಶಾಸಕರಾದ ಸಿ.ಎಸ್.ನಾಡಗೌಡ ಅವರು ದಲಿತರು, ಬಡವರ ಅಂಗಡಿಗಳನ್ನು ತೆರವು ಕಾರ್ಯಚರಣೆ ನೆಪದಲ್ಲಿ ತೊಂದರೆ ಕೊಡುತ್ತಿದ್ದಾರೆ ಎಂದರು.

ಉಮೇಶ ಕಾರ್ಜೋಳ ಖಂಡನೆ: ತಾಳಿಕೋಟೆ ಬಸ್ ನಿಲ್ದಾಣದ ಮುಂಭಾಗದ ಹರಳ್ಳಯ್ಯ ಸಮೂದಾಯದ ಜನರ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಅವುಗಳನ್ನು ಅಧಿಕಾರಿಗಳು ಒಡೆದುಹಾಕಿ ತೆರವು ಮಾಡಿರುವುದನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರ್ಜೋಳ ಖಂಡಿಸಿದ್ದಾರೆ.

ಬಿಜೆಪಿ ಎಸ್ಸಿ ಮೋರ್ಚಾದಿಂದ ಇಂದು ಹೋರಾಟ: ಅಂಗಡಿಗಳನ್ನು ಒಡೆದು ಹಾಕಿ ತೆರವುಗೊಳಿಸಿರುವದನ್ನು ಖಂಡಿಸಿ ನ.14ರಂದು ತಾಳಿಕೋಟೆ ಪಟ್ಟಣದಲ್ಲಿ ಪ್ರತಿಭಟನೆಯ ಜೊತೆಗೆ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಹೋರಾಟ ತಿಳಿಸಿದ್ದಾರೆ.

ರಾಜಕೀಯ ಬೆರೆಸೋದು ಸರಿಯಲ್ಲ

ತಾಳಿಕೋಟೆ ಪುರಸಭೆಯ 23 ಸದಸ್ಯರ ಉಪಸ್ಥಿತಿಯಲ್ಲಿಯೇ ಸಂಪೂರ್ಣ ತೆರವು ಕಾರ್ಯಾಚರಣೆ ನಡೆಸಲು ಸಾಮಾನ್ಯ ಸಭೆಯಲ್ಲಿ ಠಾರಾವು ಪಾಸು ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿತ್ತು. ಅದರಂತೆ ಒತ್ತುವರಿ ತೆರವು ಮಾಡಲಾಗಿದೆ. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲಿ ಎಂದು ಪುರಸಭಾ ಸದಸ್ಯೆ ಅಕ್ಕಮಹಾದೇವಿ ಕಟ್ಟಿಮನಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net