ಕಲಬುರಗಿ ಪೊಲೀಸ್​ ಠಾಣೆಯಲ್ಲಿ ಹೈಡ್ರಾಮ: ಬಿಜೆಪಿ ದೂರು ನಿರಾಕರಣೆಗೆ ಕಿಡಿ

Capture
Published on

ಕಲಬುರಗಿ: ಗುತ್ತಿಗೆದಾರ ಸಚಿನ್ ಪಾಂಚಾಳ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ನಮ್ಮ ಕೊಲೆಗೆ ಸಂಚು ಹೂಡಿದ್ದು, ಎಫ್‌ಐಆರ್ ದಾಖಲಿಸುವಂತೆ ಬಿಜೆಪಿ ನಾಯಕರಿಂದ ದೂರು ಸ್ವೀಕರಿಸದ್ದರಿಂದ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸಂಜೆ ಹೈಡ್ರಾಮಾ ನಡೆಯಿತು.

ಡೆತ್‌ನೋಟ್‌ನಲ್ಲಿ ಸುಪಾರಿ ಉಲ್ಲೇಖಿತ ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್ ಸೇರಿ ಮುಖಂಡರು ಪರಿಪರಿ ಬೇಡಿಕೊಂಡರೂ ದೂರು ಸ್ವೀಕರಿಸಿ ಎಫ್‌ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದರು. ಹಾಗಾದರೆ ನ್ಯಾಯಾಧೀಶರ ಮುಂದೆ ಕರೆದೊಯ್ದು ಅವರ ಸೂಚನೆಯಂತೆ ದೂರು ಸ್ವೀಕರಿಸಿ ಎಂದು ಪಟ್ಟು ಹಿಡಿದಾಗ ಪೊಲೀಸರು ಆರಂಭದಲ್ಲಿ ಹೋಗೋಣ ಎಂದು ನಂತರ ಜತೆಗೆ ಬರಲು ನಿರಾಕರಿಸಿದರು.

ನಮ್ಮಿಂದ ಎಫ್‌ಐಆರ್ ದಾಖಲಿಸಲು ಆಗಲ್ಲ ಎಂದು ಹಿಂಬರಹ ಕೊಡಿ ಎಂದು ಬಿಜೆಪಿ ಮುಖಂಡರು ಕೇಳಿದರೂ ನಿರಾಕರಿಸಿದ್ದು ಕ್ಷಣಕಾಲ ಪಿಐ ಶಕೀಲ್ ಅಂಗಡಿ ಮತ್ತು ಶಾಸಕ ಮತ್ತಿಮಡು ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು. ಕ್ಷಣಕ್ಕೊಂದು ಮಾತನಾಡ್ತೀರಾ? ದೂರು ತೆಗೆದುಕೊಳ್ಳಲು ಏನು ಸಮಸ್ಯೆ ಎಂದು ವಾಗ್ದಾಳಿ ನಡೆದರು. ಎಫ್‌ಐಆರ್ ಮಾಡಲು ಆಗಲ್ಲ ಎಂದು ಪಿಐ ಅಂಗಡಿ ಸರಾಸಾಗಾಟಾಗಿ ತಳ್ಳಿ ಹಾಕಿದರು.

ಎಸಿಪಿ ಚಂದ್ರಶೇಖರ ಠಾಣೆಗೆ ಆಗಮಿಸಿ ಮಾಹಿತಿ ಪಡೆದರೂ ಎಫ್‌ಐಆರ್ ಕುರಿತು ಸ್ಪಷ್ಟ ನಿಲುವಿಗೆ ಬರಲಿಲ್ಲ. ತಡರಾತ್ರಿವರೆಗೆ ವಾಗ್ವಾದ ನಡೆದ ಬಳಿಕ ದೂರು ಸ್ವೀಕರಿಸಿ ಅಸಂಜ್ಞೆಯ ಅಪರಾಧವಾದ್ದರಿಂದ ನೈಜತೆ ಆಧಾರದ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹಿಂಬರಹ ನೀಡಿ ಕಳುಹಿಸಿದರು. ಘೋಷಣೆ ಕೂಗುತ್ತ ಹೊರ ಬಂದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಉಮೇಶ ಪಾಟೀಲ್, ಪಾಲಿಕೆ ಸದಸ್ಯ ಕೃಷ್ಣಾ ನಾಯಕ, ಶಿವಾನಂದ ಪಿಸ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net