

ಆರ್.ಕೃಷ್ಣ ಮೈಸೂರು
‘ಲಕ್ಷ ವೃಕ್ಷೋತ್ಸವ’ ಸಂಕಲ್ಪ ತೊಟ್ಟಿದ್ದ ಎಚ್.ವಿ.ರಾಜೀವ್ ಸ್ನೇಹ ಬಳಗ, ಅದನ್ನು ಯಶಸ್ಸಿಯಾಗಿ ಪೂರೈಸುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿದೆ. ಹಸಿದವರಿಗೆ ಅನ್ನ ನೀಡುವಂತೆ ಪರಿಸರ ಉಳಿವಿಗೆ ತನ್ನದೇ ಅದ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿರುವ ಸ್ನೇಹ ಬಳಗ, ನಗರದಲ್ಲಿ ಒಂದು ಲಕ್ಷ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಣೆ ಕೂಡಾ ಮಾಡಿದ್ದಾರೆ.
ಮೈಸೂರು ರಾಜರ ಕಾಲದಿಂದಲೂ ಯೋಜನಾ ಬದ್ಧವಾಗಿ ಬೆಳೆದಿರುವ ನಗರ, ಇತ್ತೀಚಿನ ವರ್ಷದಲ್ಲಿ ನಗರ ಬೆಳೆದಂತೆ ಮರಗಳ ಹನನ ಹೆಚ್ಚಾಗಿ ತಾಪಮಾನ ಏರಿಕೆ ಕಂಡಿತ್ತು. ಹೀಗಾಗಿ ಐದು ವರ್ಷಗಳ ಹಿಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಚ್.ವಿ.ರಾಜೀವ್ ನೇತೃತ್ವದಲ್ಲಿ ಬಳಗವು ಒಂದು ಲಕ್ಷ ಸಸಿಗಳನ್ನು ನೆಡುವ ಸಂಕಲ್ಪ ಮಾಡಿತು.
ಗಿಡ-ಮರಗಳನ್ನು ಬೆಳೆಸುವುದು ಅರಣ್ಯ ಇಲಾಖೆಗೆ ಮಾತ್ರ ಸಂಬಂಧಿಸಿದಲ್ಲ. ನಾವಿಂದು ಮರಗಳನ್ನು ಕಡಿಯುತ್ತಿರುವ ಪ್ರಮಾಣ ನೋಡಿದರೆ, ಮನೆಗೊಬ್ಬರಂತೆ ಒಂದೊಂದು ಗಿಡಗಳನ್ನು ನೆಟ್ಟು ಬೆಳೆಸಬೇಕಿದೆ. ಅಲ್ಲದೆ ಪ್ರತಿಯೊಬ್ಬರಲ್ಲಿಯೂ ಗಿಡ-ಮರಗಳನ್ನು ಬೆಳೆಸುವ ಮನೋಭಾವನೆ ಬರಬೇಕು. ಪ್ರಕೃತಿ ಇದ್ದರೆ ನಾವು, ಮನೆಗೊಂದು ಮರ ಸಾಲದು, ಒಬ್ಬರಿಗೊಂದು ಮರ ಎನ್ನುವ ಪರಿಕಲ್ಪನೆಯೊಂದಿಗೆ ಲಕ್ಷ ವೃಕ್ಷೋತ್ಸವ ಚಾಲನೆ ನೀಡಲಾಯಿತು.
ಜಾಗತಿಕ ತಾಪಮಾನದಲ್ಲಾಗುತ್ತಿರುವ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ನಗರದ ವಾತಾವರಣಕ್ಕೆ ತಕ್ಕಂತೆ ಅರಳಿ, ಬೇವು, ಆಲ, ಮಹಾಘನಿ, ಬೇಲ, ಹೊಂಗೆ, ಕಾಡುಬೆಂಡೆ ಸೇರಿದಂತೆ ಹಲವು ಬಗೆಯ ಕಾಡು ಜಾತಿಯ ಗಿಡಗಳನ್ನು ಎದೆ ಎತ್ತರಕ್ಕೆ ಬೆಳೆಸುತ್ತಿದ್ದರು. ಅಲ್ಲದೇ ಸಾರ್ವಜನಿಕರಿಗೆ, ಸಂಘ, ಸಂಸ್ಥೆಗಳಿಗೆ ಉಚಿತವಾಗಿ ವಿತರಣೆ ಮಾಡುವ ಮೂಲಕ ಪ್ರಕೃತಿ ಉಳಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲಾಗಿದೆ.
ಸಣ್ಣ ಸಸಿಗಳನ್ನು ನೀಡಿದರೆ ಅವುಗಳಲ್ಲಿ ಸಾಕಷ್ಟು ಸಸಿಗಳು ಬೆಳೆಯಲು ಸಾಧ್ಯವಾಗದೆ ಸತ್ತು ಹೋಗುವ ಸಾಧ್ಯತೆ ಇದೆ. ಹಾಗಾಗಿ ಒಂದರಿಂದ ಎರಡು ವರ್ಷಗಳ ವರೆಗೆ ಸಸಿಗಳನ್ನು ಪೋಷಿಸಿ ಸ್ವಲ್ಪ ಎತ್ತರಕ್ಕೆ ಬೆಳೆದ ಬಳಿಕ ಅವುಗಳನ್ನು ವಿತರಣೆ ಮಾಡಲಾಗುತ್ತಿದೆ. ಬೆಳೆದ ಗಿಡಗಳು ಸ್ವಾವಲಂಭಿಗಳಾಗಿ ಬೆಳೆಯುವ ಜತೆಗೆ ಎತ್ತರ ಇರುವುದರಿಂದ ಹಸು, ಕುರಿಗಳ ಬಾಯಿಗೆ ತುತ್ತಾಗದೆ ಬಹುತೇಕ ಗಿಡಗಳು ಬದುಕಿ ಬೆಳೆಯುತ್ತವೆ.
2019 ರಿಂದ ಆರಂಭ
ಹಲವು ಸಮಾಜಮುಖಿ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ 2019 ರಿಂದ ಆರಂಭಿಸಿದ ಸಸಿಗಳನ್ನು ವಿತರಿಸುವ ಕಾರ್ಯ ಯಶಸ್ವಿಯಾಗಿ ಸಾಗುತ್ತಿದ್ದು, ಮೈಸೂರು ವಿಮಾನ ನಿಲ್ದಾಣದ ಸುತ್ತಮುತ್ತ, ಎಚ್.ಡಿ.ಕೋಟೆ ಮುಖ್ಯರಸ್ತೆ, ಹಲವು ಶಾಲಾ-ಕಾಲೇಜು ಆವರಣ, ಆಸ್ಪತ್ರೆಗಳು, ಸಾರ್ವಜನಿಕ ಉದ್ಯಾನಗಳು, ಆಟದ ಮೈದಾನಗಳ ಸುತ್ತ, ರುದ್ರಭೂಮಿಗಳಲ್ಲಿ ಹಸಿರೀಕರಣಕ್ಕೆ ಕಾರಣವಾಗಿದೆ.
ಹೆಚ್ಚುತ್ತಿರುವ ಉಷ್ಣಾಂಶವನ್ನು ಗಮನಿಸಿ, ಪ್ರಕೃತಿ ಇದ್ದರೆ ನಾವು ಎಂಬ ಸಾರ್ವಕಾಲಿಕ ಸತ್ಯ ನುಡಿಯಂತೆ ಸಣ್ಣ ಸಸಿಗಳನ್ನು ತಂದು ಪೋಷಣೆ ಮಾಡಿ, 7 ರಿಂದ 8 ಅಡಿ ಎತ್ತರದವರೆಗೆ ಬೆಳೆಸಿ ಗಿಡಗಳನ್ನು ವಿತರಣೆ ಮಾಡುತ್ತಿದ್ದೇವೆ ಎಂದು ಸ್ನೇಹ ಬಳಗದ ಎಚ್.ವಿ.ರಾಜೀವ್ ತಿಳಿಸಿದರು.
2019 ರಿಂದ ಪ್ರತಿ ವರ್ಷ 15-20 ಸಾವಿರ ಗಿಡಗಳನ್ನು ಉಚಿತವಾಗಿ ವಿತರಣೆ ಮಾಡುತ್ತಾ ಬಂದಿದ್ದು, ಈ ವರ್ಷಕ್ಕೆ ಒಂದು ಲಕ್ಷ ಗಿಡಗಳನ್ನು ವಿತರಿಸಿದಂತಾಗಲಿದೆ. ಈ ಸುಸಂದರ್ಭವನ್ನು ಸ್ಮರಣಿಯವಾಗಿಸಲು ಲಕ್ಷ ವೃಕ್ಷೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಸಿದ್ಧತೆ ನಡೆದಿದೆ.
ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇನ್ನಿತರೆ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸಿ 15-20 ಸಾವಿರ ಗಿಡಗಳನ್ನು ಉಚಿತವಾಗಿ ವಿತರಣೆ ಮಾಡಲು ಉದ್ದೇಶಿಸಲಾಗಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ.ಟ್ರಸ್ಟ್, ಪತಂಜಲಿ ಯೋಗ ಶಿಕ್ಷಣ, ಜಿಲ್ಲಾ ಪತ್ರಕರ್ತರ ಸಂಘ ಸೇರಿದಂತೆ ನಗರದ ಪ್ರಮುಖ ಸಮಾಜಮುಖಿ ಸಂಘ-ಸಂಸ್ಥೆಗಳು, ಗಣ್ಯರ ಸಹಕಾರದಲ್ಲಿ ಅರಣ್ಯ ಇಲಾಖೆ ಮಾರ್ಗದರ್ಶನದೊಂದಿಗೆ ತಮ್ಮದೇ ಸ್ವಂತ ಜಾಗದಲ್ಲಿ ಸಣ್ಣ ಸಸಿಗಳನ್ನು ತಂದು ಬೆಳೆಸಿ, ವಿತರಣೆ ಮಾಡುವ ಕಾರ್ಯವನ್ನು ಆರಂಭಿಸಲಾಯಿತು.
ಸಣ್ಣ ಸಸಿಗಳನ್ನು ನೀಡಿದರೆ ಬಿಸಿಲಿಗೆ ಒಣಗಿ ಹೋಗುತ್ತವೆ ಎಂಬ ಕಾರಣಕ್ಕೆ 7-8 ಅಡಿಯಷ್ಟು ಎತ್ತರ ಬೆಳೆಸಿ ಬಳಿಕ ವಿತರಣೆ ಮಾಡಲು ನಿರ್ಧರಿಸಲಾಯಿತು. ಹೀಗಾಗಿ ನೆಟ್ಟ ಬಹುತೇಕ ಗಿಡಗಳು ಬೆಳೆದು ಈಗ ಮರವಾಗಿ ನೆರಳು ನೀಡುವಂತಾಗಿರುವುದು ಹರ್ಷ ತಂದಿದೆ ಎಂದರು ರಾಜೀವ್.
ಗಿಡಗಳ ಸಂರಕ್ಷಣೆಗೆ 25 ಲಕ್ಷ ರೂ. ವೆಚ್ಚ:
ಪ್ರತಿ ವರ್ಷ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಬೆಳೆಸಿದ ಗಿಡಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಬೆಳೆದ ಬಳಿಕ ಅವುಗಳನ್ನು ಸಂರಕ್ಷಣೆ ಮಾಡಿ ಬೆಳೆಸುವ ಆಸಕ್ತರಿಗೆ ಮಾತ್ರ ವಿತರಣೆ ಮಾಡುತ್ತಿದ್ದೇವೆ. ಮೈಸೂರು ನಗರಪಾಲಿಕೆಯೂ ಪ್ರತಿ ವರ್ಷ 2-3 ಸಾವಿರ ಗಿಡಗಳನ್ನು ಪಡೆಯುತ್ತಿದೆ. ಹಾಗೆಯೇ ಮುಡಾ ವ್ಯಾಪ್ತಿಯ ಬಡಾವಣೆಗಳಲ್ಲಿಯೂ ಸಾವಿರಾರು ಸಸಿಗಳನ್ನು ನೆಡಲಾಗಿದೆ. ಕೆಲ ಪ್ರಮುಖ ವ್ಯಕ್ತಿಗಳೂ ಸಹ ಸಾವಿರ, ಎರಡು ಸಾವಿರದಂತೆ ಗಿಡಗಳನ್ನು ಪಡೆದು ತಮ್ಮ ಜಮೀನು, ತೋಟಗಳಲ್ಲಿ ಬೆಳೆಸುತ್ತಿದ್ದಾರೆ. ಎನ್‌ಜಿಒ, ಶೈಕ್ಷಣಿಕ ಸಂಸ್ಥೆಗಳು ತಮ್ಮ ಸಂಸ್ಥೆಗಳ ಆವರಣದಲ್ಲಿ ಬೆಳೆಸಲು ಗಿಡಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು. ನಗರದಲ್ಲಿ ಸುಂದರವಾಗಿ ಕಾಣುವ ಗುಲ್‌ಮೊಹರ್ ಮರಗಳಿದ್ದರೂ, ಅವು ಹೂ ಬಿಟ್ಟಾಗ ಸುಂದರವಾಗಿ ಕಾಣುತ್ತವೆಯೇ ಹೊರತು ಗಾಳಿ, ಮಳೆಗೆ ತಡೆಯುವುದಿಲ್ಲ. ಗಾಳಿ-ಮಳೆಗೆ ಮುರಿದು ಬೀಳುವ ಪ್ರಮಾಣ ಹೆಚ್ಚು. ಆದ್ದರಿಂದ ಗುಲ್‌ಮೊಹರ್ ಮರಗಳಿಗಿಂತ ಗಟ್ಟಿಯಾಗಿರುವ ಕಾಡು ಜಾತಿಯ ಗಿಡಗಳನ್ನು ಬೆಳೆಸಬೇಕು. ರಸ್ತೆ ಬದಿಯಲ್ಲಿರುವ ಮರಗಳ ಸುತ್ತ ಜಾಗ ಬಿಡುವುದು ಅವಶ್ಯವಾಗಿದೆ. ಇದರಿಂದ ಬುಡಸಮೇತ ಮುರಿದು ಬಿದ್ದ ಮರದ ಜಾಗದಲ್ಲಿ ಮತ್ತೊಂದು ಗಿಡ ನೆಟ್ಟು ಬೆಳೆಸಲು ಅನುಕೂಲವಾಗಲಿದೆ ಎಂಬುದು ರಾಜೀವ್ ಸಲಹೆ.
ಒಂದು ದಿನ ಸಸಿ ನೆಟ್ಟರೆ ಸಾಲದು
ಪರಿಸರ ದಿನಾಚರಣೆ ವೇಳೆ ಎಲ್ಲೋ ಒಂದು ಕಡೆ ಗಿಡಕ್ಕೆ ನೀರು ಹಾಕುವುದು ಪರಿಸರ ಸಂಕರಷಣೆ ಅಗುವುದಿಲ್ಲ. ತಮ್ಮ ಮನೆ ಮುಂದೆ, ಜಮೀನುಗಳಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿ ಅದು ಮರವಾಗಿ ಬೆಳೆದರಷ್ಟೇ ಪರಿಸರ ಸಂರಕ್ಷಣೆ. ಹಾಗಾಗಿ ಜನರು ತಮ್ಮ, ತಮ್ಮ ಮನೆ ಮುಂದೆ ಇರುವ ಗಿಡಗಳನ್ನು ನೀರುಣಿ ಬೆಳೆಸಿದರೆ ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನ ನಿಯಂತ್ರಣ ಸಾಧ್ಯ.
ಎಚ್.ವಿ.ರಾಜೀವ್, ಮಾಜಿ ಅಧ್ಯಕ್ಷ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ