ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ

07 Hunasagi 01
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ದಲಿತ ಮುಖಂಡ ಪ್ರಸಾದರನ್ನು ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಹುಣಸಗಿಯಲ್ಲಿ ಸೋಮವಾರ ಸಾಮೂಹಿಕ ದಲಿತಪರ ಸಂಘಟನೆಯಿAದ ಪ್ರತಿಭಟನೆ ಮಾಡಿ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿದರು. ಪವಾಡೆಪ್ಪ ಮ್ಯಾಗೇರಿ, ಮಾನಪ್ಪ ಕಟ್ಟಿಮನಿ, ಸುರೇಶ ದೊಡ್ಡಮನಿ, ಸಿದ್ದಣ್ಣ ಮೇಲಿನಮನಿ ಇತರರಿದ್ದರು.
Published on

ಹುಣಸಗಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ದಲಿತ ಮುಖಂಡ ಪ್ರಸಾದ್‌ನನ್ನು ಭೀಕರವಾಗಿ ಕೊಲೆ ಮಾಡಿರುವ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಸಾಮೂಹಿಕ ದಲಿತ ಸಂಘಟನೆ ಕರ‍್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ನಂತರ ಮಾತನಾಡಿದ ದಲಿತ ಮುಖಂಡ ಪವಾಡೆಪ್ಪ ಮ್ಯಾಗೇರಿ, ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದ್ದು, ನಿತ್ಯ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿದೆ. ಇದನ್ನು ಕೂಡಲೇ ರಾಜ್ಯ ಸರ್ಕಾರ ತಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಮುಖಂಡ ಪ್ರಸಾದನನ್ನು ಕೊಲೆ ಮಾಡಿದ ಆರೋಪಿಗಳಿಗೆ ಸರ್ಕಾರ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಶರಣಪ್ಪ ಗುಳಬಾಳ, ರಾಮಣ್ಣ ಕಲ್ಲದೇವನಹಳ್ಳಿ ಮಾತನಾಡಿ, ಪ್ರಸಾದ್ ಮರಣದಿಂದ ಅನಾಥವಾದ ಆತನ ಕುಟುಂಬಕ್ಕೆ ರಾಯಚೂರು ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ಮತ್ತು ಭೂ ಒಡೆತನ ಯೋಜನೆಯಡಿ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು.

ಮಾನಪ್ಪ ಕಟ್ಟಿಮನಿ, ಹುಲಗಪ್ಪ ಬೈಲಕುಂಟಿ, ಚನ್ನಪ್ಪ ತಿರ್ಥ, ಸಿದ್ದಣ್ಣ ಮೇಲಿನಮನಿ,ನಾಗರಾಜ ದೊಡ್ಡಮನಿ, ಮುದಕಪ್ಪ ಆನೇಕಿ, ಪರಮಣ್ಣ ಕಟ್ಡಿಮನಿ, ಸುರೇಶ ದೊಡ್ಡಮನಿ,ದೇವರಾಜ ಹೊರಟ್ಟಿ, ಮಲ್ಲು ಮ್ಯಾಗೇರಿ ಇತರರಿದ್ದರು. ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್‌ಗೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net