ಬೈಕ್ ಸವಾರನ ಮೇಲೆ ಚಿರತೆ ದಾಳಿ

MMhalli Leopard
ಮರಿಯಮ್ಮನಹಳ್ಳಿ ಸಮೀಪದ ಹನುಮನಹಳ್ಳಿ ಬಳಿ ಕಾಣಿಸಿಕೊಂಡ ಚಿರತೆ.
Published on

ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿ ಮತ್ತು ಮಾಗಳ ಗ್ರಾಮ ಸಂಪರ್ಕದ ರಸ್ತೆಯಲ್ಲಿ ತೆರಳುತ್ತಿದ್ದ ಬೈಕ್ ಸವಾರನ ಮೇಲೆ ಶನಿವಾರ ಚಿರತೆ ದಾಳಿ ಮಾಡಿದೆ.

ಮಾಗಳ ಗ್ರಾಮದ ಎಸ್.ಎಂ.ಪ್ರವೀಣ ಗಾಯಗೊಂಡಿದ್ದಾರೆ. ಹಿರೇಹಡಗಲಿಯಿಂದ ಮಾಗಳಕ್ಕೆ ತೆರಳುತ್ತಿದ್ದ ಪ್ರವೀಣ ಮೇಲೆ ಚಿರತೆ ಏಕಾಏಕಿ ದಾಳಿ ಮಾಡಿದೆ. ವಾಹನದ ನಿಯಂತ್ರಣ ತಪ್ಪಿ ಕೆಳಕ್ಕೆ ಬೀಳುತ್ತಿದಂತೆ ಜೋರಾಗಿ ಕಿರುಚಿಕೊಂಡಿದ್ದಾರೆ. ಕಿರುಚಾಟ ಕೇಳಿದ ಅಕ್ಕಪಕ್ಕದ ಹೊಲ ಮತ್ತು ಗದ್ದೆಗಳಲ್ಲಿ ಕೆಲಸ ಮಾಡುವವರು ಬರುತ್ತಿದ್ದಂತೆ ಚಿರತೆ ಓಡಿ ಹೋಗಿದೆ.

ಗಾಯಗೊಂಡ ಪ್ರವೀಣ ಹಿರೇಹಡಗಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರದೇಶದಲ್ಲಿ ಪದೇಪದೆ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನರು ಓಡಾಡುವುದು ಕಷ್ಟವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೋನು ಅಳವಡಿಸಿ ಚಿರತೆ ಸೆರೆ ಹಿಡಿಯಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಹನುಮನಹಳ್ಳಿ ಗ್ರಾಮದ ಬಳಿ ಪ್ರತ್ಯಕ್ಷ: ಮರಿಯಮ್ಮನಹಳ್ಳಿ ಸಮೀಪದ ಹನುಮನಹಳ್ಳಿ ಗ್ರಾಮದಲ್ಲಿ ಭಾನುವಾರ ಚಿರತೆ ಪ್ರತ್ಯಕ್ಷವಾಗಿದ್ದು, ಜನರು ಭಯಭೀತರಾಗಿದ್ದಾರೆ. ಅಲ್ಲದೆ ಗಾಳೆಮ್ಮನಗುಡಿ, ಡಣಾಪುರ, ವ್ಯಾಸನಕೆರೆ, ಗುಂಡಾ ಗ್ರಾಮದ ಸುತ್ತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಾಯಿಗಳನ್ನು ಹೊತ್ತೊಯ್ಯುತ್ತಿವೆ. ಸ್ಮಯೋರ್, ಬಿಎಂಎಂ ಕೈಗಾರಿಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಭಯದೊಂದಿಗೆ ಓಡಾಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಬೋನು ಅಳವಡಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net