

ಹೂವಿನಹಿಪ್ಪರಗಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸೇರಿ ದಿನ ನಿತ್ಯ ಬಳಸುವ ವಸ್ತುಗಳ ಬೆಲೆ ಗಗನಕ್ಕೇರಿದ ಹಿನ್ನೆಲೆ ರಾಜ್ಯವ್ಯಾಪ್ತಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಎಸ್. ಪಾಟೀಲ ಯಾಳಗಿ ಹೇಳಿದರು.
ಸ್ಥಳೀಯ ಪರಮಾನಂದ ವೃತ್ತದ ಬಳಿಯ ಸಂಗಮೇಶ್ವರ ಪೆಟ್ರೋಲ್ ಬಂಕ್ ಮುಂದುಗಡೆ ಸ್ಥಳೀಯ ಬ್ಲಾಕ್ ಕಾಂಗ್ರೆಸ್ ಸೋಮವಾರ ಹಮ್ಮಿಕೊಂಡಿದ್ದ ಕೈ ನಾಯಕರ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಬಿಜೆಪಿ ಬಡವರ ಪಕ್ಷ, ರೈತರ ಉದ್ಧಾರ ಮಾಡುವ ಪಕ್ಷ ಎಂದು ದೊಡ್ಡ ದೊಡ್ಡ ಭಾಷಣಗಳನ್ನು ಮಾಡುವ ನಾಯಕರು ಎಲ್ಲಿದ್ದಾರೆ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣದಿಂದ ಇಲ್ಲಿಯವರೆಗೆ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ಎಲ್‌ಪಿಜಿ ಗ್ಯಾಸ್ ಇವುಗಳ ಬೆಲೆ ಮೇಲಿಂದ ಮೇಲೆ ಹೆಚ್ಚಳ ಮಾಡುತ್ತಲೇ ಬಂದಿದೆ. ಇದರಿಂದ ಮಧ್ಯಮ ವರ್ಗದ ಜನರಿಗೆ ತೀವ್ರ ತೊಂದರೆಯಾಗಿದೆ ಎಂದರು.
ಮಹಿಳಾ ಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರಮೇಜಾ ನದಾಫ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಡಾ. ವಿಶ್ವನಾಥ ಮಠ ಮಾತನಾಡಿದರು.
ಪಕ್ಷದ ಮುಖಂಡರಾದ ಗುರುರಾಜ ಗುಡಿಮನಿ, ಮಂಜುನಾಥ ಬುದ್ನಿ, ಸಿದ್ದು ಮೇಟಿ, ಬಾಳಸಾಹೇಬಗೌಡ ಪಾಟೀಲ, ಪಿ.ಜಿ. ಗೊಠೇದ, ರಮಜಾನ ಮುಜಾವರ, ಬಂಗಾರೆಪ್ಪಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಚಂದು ಗುಂಡಾನವರ, ಶರಣಗೌಡ ಕಲ್ಲಪ್ಪಗೋಳ, ಆದಮಸಾಬ ಡವಳಗಿ, ಸಂಗನಗೌಡ ತೆಗ್ಗಿನಮನಿ, ಚನ್ನು ರೆಡ್ಡಿ, ನಜೀರ್ ಮುಲ್ಲಾ, ಹುಸೇನಸಾಬ ಚಪ್ಪರಬಂದ, ದಸ್ತು ಮುಜಾವರ, ದಾದಾಪೀರ ಚಪ್ಪರಬಂದ, ಭೀಮಪ್ಪ ನಾಟಿಕಾರ ಇತರರಿದ್ದರು.