ಮಕ್ಕಳಿಗೆ ಓದುವ ಹವ್ಯಾಸ, ಸಂಸ್ಕಾರ ಕಲಿಸಿ

Hadagali Milara
ಸುಕ್ಷೇತ್ರ ಮೈಲಾರದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮೈಲಾರಲಿಂಗೇಶ್ವರ ಸ್ವಾಮಿಗೆ ಸಾಮೂಹಿಕ ಬಿಲ್ವಾರ್ಚನೆ ಮಾಡಲಾಯಿತು. ಪ್ರಧಾನ ಅರ್ಚಕ ಪ್ರಮೋದ್ ಭಟ್, ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಇತರರಿದ್ದರು.
Published on

ಹೂವಿನಹಡಗಲಿ: ಆಧುನಿಕ ಯುಗದ ಭರಾಟೆಯಲ್ಲಿ ಧರ್ಮ, ಸಂಸ್ಕೃತಿ ನಶಿಸಿಹೋಗುತ್ತಿವೆ. ಇದರಿಂದ ಪರಂಪರೆ ಹಾಳಾಗುವುದಲ್ಲದೆ ಪೂರ್ವಜರು ಕಾಪಾಡಿಕೊಂಡು ಬಂದ ಆಚಾರ, ವಿಚಾರಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಸುಕ್ಷೇತ್ರ ಮೈಲಾರದ ಶಿವ ಚಿದಂಬರ ಧಾರ್ಮಿಕ ಭವನದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಗೆ ಸಾಮೂಹಿಕ ಬಿಲ್ವಾರ್ಚನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಆಧುನಿಕ ಜೀವನ ಶೈಲಿ ಮತ್ತು ನಾಗರಿಕತೆಯಿಂದ ನಶಿಸಿ ಹೋಗುತ್ತಿರುವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರದ್ದಾಗಿದೆ. ಮಹಿಳೆಯರು ನಿತ್ಯ ಕೆಲಸಗಳೊಂದಿಗೆ ಮಾನವೀಯ ಮೌಲ್ಯಗಳನ್ನು ಬಿತ್ತುವ ಕಥೆ, ಕವನ ಗಾದೆ, ಒಗಟುಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಮತ್ತು ಮಕ್ಕಳಿಗೂ ಕಲಿಸಬೇಕು. ಇದರಿಂದ ಕುಟುಂಬಗಳು ಸಹಬಾಳ್ವೆಯಿಂದ ಬಾಳಲು ಸಹಕಾರಿಯಾಗಲಿವೆ ಎಂದರು.

ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ ಮಾತನಾಡಿದರು. ದೇವಸ್ಥಾನದ ಪ್ರಧಾನ ಅರ್ಚಕ ಪ್ರಮೋದ್ ಭಟ್ ಪೌರೋಹಿತ್ಯದಲ್ಲಿ ಸಮೂಹಿಕ ಬಿಲ್ವಾರ್ಚನೆ ಹಾಗೂ ಪೂಜಾ ಕೈಂಕರ್ಯಗಳು ಜರುಗಿದವು. ಗ್ರಾಪಂ ಅಧ್ಯಕ್ಷೆ ಜಾನಕಮ್ಮ ತಳವಾರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಬಸವರಾಜ ಹರವಿ, ತಾಲೂಕು ಯೋಜನಾಧಿಕಾರಿ ತಿಲಕರಾಜ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕೋಡಿಹಳ್ಳಿ ಕೊಟ್ರೇಶ, ಗ್ರಾಪಂ ಮಾಜಿ ಅಧ್ಯಕ್ಷ ನಾಗಪ್ಪ ದೇವರಗುಡ್ಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net