

ಹೂವಿನಹಗಲಿ: ಬಂಡಾಯ ಸಾಹಿತ್ಯವು ಬದುಕಿನ ಮೌಲ್ಯವನ್ನು ಅರ್ಥೈಸುವ ಜತೆಗೆ ಸಾಮಾಜಿಕ ಸಾಮರಸ್ಯ ಕಾಪಾಡುತ್ತದೆ ಎಂದು ಸಾಹಿತಿ ಡಾ.ಅಂಜನಾ ಕೃಷ್ಣಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಭಾನುವಾರ ಆಯೋಜಿಸಿದ್ದ ಬಂಡಾಯ-44 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಂಡಾಯ ಸಾಹಿತ್ಯ ಸಂಘಟನೆಯು ಅಸಮಾನತೆಯ ವಿರುದ್ಧ ಮತ್ತು ಶೋಷಿತರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಾಮಾಜದಲ್ಲಿ ಸೌಹಾರ್ದಕ್ಕಾಗಿ ಬದುಕು ರೂಪಿಸಲು ಶ್ರಮಿಸುತ್ತಿದೆ. ಈ ಸಾಹಿತ್ಯವು ಬದುಕಿನ ಅರ್ಥೈಸುವಿಕೆಯ ವೇದಿಕೆಯಾಗಿದ್ದು ಇಂತಹ ಜನಪರ ಕಾಳಜಿಯುಳ್ಳ ಸಾಹಿತ್ಯ ಸಂಘಟನೆಯನ್ನು ನಾವು ಮುಂದಿನ ಪೀಳಿಗೆಯವರೆಗೂ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
‘ಬಂಡಾಯ ಸಾಹಿತ್ಯ ಚಾರಿತ್ರಿೃಕ ಹೆಜ್ಜೆಗಳು’ ವಿಷಯದ ಕುರಿತು ಉಪನ್ಯಾಸ ನೀಡಿದ ಬಂಡಾಯ ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ, 1979ರ ಕಾಲಘಟ್ಟದಲ್ಲಿ ಹುಟ್ಟಿದ ಬಂಡಾಯ ಸಾಹಿತ್ಯ ಸಂಘಟನೆಗೆ 44 ವರ್ಷ ತುಂಬಿವೆ. ಸಮಾಜದಲ್ಲಿ ಮನುಷ್ಯ-ಮನುಷ್ಯರ ನಡುವೆ ಮಾನವೀಯ ಸಂಬಂಧಗಳನ್ನು ಬೆಸೆಯುವ ಆಶಯ ಹೊಂದಿದೆ. ಮೌಢ್ಯ, ದಬ್ಬಾಳಿಕೆ, ಅಸಮಾತನತೆ ವಿರುದ್ಧ, ನೊಂದ ಜನತೆಯ ಪರ ಧ್ವನಿಯಾಗಿ ಕೆಲಸ ಮಾಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಡಾಯ ಸಾಹಿತಿ ಇಸ್ಮಾಯಿಲ್ ಎಲಿಗಾರ ವಹಿಸಿದ್ದರು. ಸಂಚನಾ ಪ್ರಕಾಶನ ಕೊಡುಮಾಡುವ 2019ರ ‘ಸಿಂಚನಾ ಪ್ರಶಸ್ತಿ’ಯನ್ನು ರಮೇಶ ಗಬ್ಬೂರುಗೆ, 2020 ಸಾಲಿನ ಪ್ರಶಸ್ತಿಯನ್ನು ಹೆಬಸೂರ ರಂಜಾನಗೆ ಪ್ರದಾನ ಮಾಡಲಾಯಿತು. ನಂತರ ಕವಿಗೋಷ್ಠಿ ನಡೆಯಿತು. ಬಂಡಾಯ ಸಾಹಿತಿ ಸಂಘಟನೆಯ ಜಿಲ್ಲಾ ಸಂಚಾಲಕ ಪಿ.ಆರ್.ವೆಂಕಟೇಶ್, ಸದಸ್ಯ ಅಬ್ದುಲ್ ಹೈ ತೋರಣಗಲ್, ಸಿಂಚನಾ ಪ್ರಕಾಶನದ ಪ್ರಕಾಶಕಿ ಸವಿತಾ ಅಂಗಡಿ, ಶಿಕ್ಷಕ ದಯಾನಂದ, ಸುರೇಶ್ ಅಂಗಡಿ ಇತರರಿದ್ದರು.