ವಿಷ ಸೇವಿಸಿ ಶಿಕ್ಷಕಿ ಆತ್ಮಹತ್ಯೆ

Hadagali Teacher Roopa Sucide
ಹೂವಿನಹಡಗಲಿ ಠಾಣೆಯ ಮುಂದೆ ರೂಪಾ ಶವದೊಂದಿಗೆ ಸಂಬಂಧಿಕರು ಸೋಮವಾರ ಪ್ರತಿಭಟನೆ ನಡೆಸಿದರು.
Published on

ಹೂವಿನಹಡಗಲಿ: ಪತಿ ಮತ್ತು ಕುಟುಂಬದವರ ಕಿರುಕುಳದಿಂದ ಬೇಸತ್ತು, ತಾನು ನಡೆಸುತ್ತಿದ್ದ ಶಾಲೆಯಲ್ಲೇ ವಿಷ ಸೇವಿಸಿ ಶಿಕ್ಷಕಿ ರೂಪಾ (ಬಸಮ್ಮ) (33) ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದಾರೆ. ಇವರ ತಾಯಿ ಬಸೆಟ್ಟಿ ಪುಷ್ಪಾವತಿ ನೀಡಿದ ದೂರಿನಂತೆ ರೂಪಾ ಪತಿ ಅರ್ಜುನ್ ಪರಶೆಟ್ಟಿ, ಆತನ ತಾಯಿ, ಸಹೋದರಿ ಸೇರಿದಂತೆ ಆರು ಜನರ ವಿರುದ್ಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹತ್ತು ವರ್ಷಗಳ ಹಿಂದೆ ರೂಪಾ-ಅರ್ಜುನ್ ಪರಸ್ಪರ ಪ್ರೀತಿಸಿ, ಹಿರಿಯರ ಒಪ್ಪಿಸಿ ಮದುವೆಯಾಗಿದ್ದರು. ಆರಂಭದಲ್ಲಿ ಅನ್ಯೋನ್ಯವಾಗಿದ್ದರು. ಕೆಲ ವರ್ಷಗಳಿಂದ ಗಂಡ ಮತ್ತು ಮನೆಯವರು ವರದಕ್ಷಿಣೆ ಒತ್ತಡ ಹೇರಿದ್ದರಿಂದ ಕಲಹ ಆರಂಭವಾಗಿತ್ತು. ಆತ್ಮಹತ್ಯೆಗೆ ಆಕೆ ಗಂಡನೇ ಪ್ರಚೋದನೆ ನೀಡುತ್ತಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ. ರೂಪಾ ಪತಿ ಮತ್ತು ಕುಟುಂಬಸ್ಥರನ್ನು ಬಂಧಿಸುವಂತೆ ಒತ್ತಾಯಿಸಿ ಸಂಬಂಧಿಕರು ಠಾಣೆಯ ಮುಂದೆ ಶವವಿರಿಸಿ ಸೋಮವಾರ ಪ್ರತಿಭಟನೆ ನಡೆಸಿದರು. ಸಂಬಂಧಿಕರ ಮನವೊಲಿಸಿದ ಪಿಎಸ್‌ಐ ಸಂತೋಷ್ ಬಿ ಡಬ್ಬಿನ್, ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಡೆತ್ ನೋಟ್‌ನಲ್ಲಿ ಏನಿದೆ?: ‘ನನ್ನ ಗಂಡ ನನ್ನೊಂದಿಗೆ ಜೀವನ ನಡೆಸಲು ನಿರಾಕರಿಸಿದ ಕಾರಣ ಮಾನಸಿಕವಾಗಿ ನೊಂದು ಸಾಯಲು ನಿರ್ಧರಿಸಿದ್ದೇನೆ. ಪರಿಪರಿಯಾಗಿ ಕೇಳಿಕೊಂಡರೂ ನನ್ನೊಂದಿಗೆ ಜೀವನ ನಡೆಸಲು ಗಂಡ ಒಪ್ಪಲಿಲ್ಲ. ಈ ನಿರ್ಧಾರ ನನ್ನ ಸಾವಿಗೆ ಕಾರಣವಾಗಬಹುದು ಎಂದು ಆತನಿಗೆ ತಿಳಿದರೂ ನಿರ್ಧಾರ ಬದಲಿಸಲಿಲ್ಲ. ಗಂಡನನ್ನು ಬಿಟ್ಟು ಬದುಕುವ ಶಕ್ತಿ ನನ್ನಲ್ಲಿಲ್ಲ. ನನ್ನ ಜೀವಕ್ಕಿಂತ ಹೆಚ್ಚಾಗಿ ಗಂಡನನ್ನು ಪ್ರೀತಿಸುತ್ತೇನೆ. ಆತ್ಮಹತ್ಯೆ ಮಹಾಪಾಪ ಎಂಬುದು ಗೊತ್ತು. ಆದರೆ, ಬದುಕಲು ನನ್ನ ಗಂಡನೇ ಅವಕಾಶ ಮಾಡಿಕೊಡುತ್ತಿಲ್ಲ. ಬದುಕುವುದಾದರೆ ನನ್ನ ಗಂಡನ ಜತೆ, ಗಂಡನ ಮನೆಯಲ್ಲಿ. ಅದಕ್ಕೆ ಅವಕಾಶ ಮಾಡಿಕೊಡದ ಕಾರಣ ಬೇರೆ ದಾರಿ ಇಲ್ಲದೆ ಎಲ್ಲರನ್ನು ಬಿಟ್ಟು ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಿ ಬಿಡಿ’ ಎಂದು ಡೆತ್‌ನೋಟಿನಲ್ಲಿ ಬರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net