

ಹೂವಿನಹಡಗಲಿ: ಕಬ್ಬು ಕಟಾವು ಮಾಡಿದ 15 ದಿನದೊಳಗಾಗಿ ಜಮಾ ಮಾಡಬೇಕಿದ್ದ ಹಣವನ್ನು ಪಾವತಿಸುವಂತೆ ಒತ್ತಾಯಿಸಿ ತಾಲೂಕಿನ ಬೀರಬ್ಬಿಯ ಮೈಲಾರ ಸಕ್ಕರೆ ಕಾರ್ಖಾನೆ ಮುಂದೆ ಬುಧವಾರ ಬೆಳೆಗಾರರು ಪ್ರತಿಭಟನೆ ನಡೆಸಿದರು.
ರೈತ ಕೊಡಬಾಳ ಹನುಮಂತಪ್ಪ ಮಾತನಾಡಿ, ವಿಜಯನಗರ ಹಾಗೂ ಹಾವೇರಿ ಜಿಲ್ಲೆಗಳ ಜಮೀನುಗಳಲ್ಲಿನ ಕಬ್ಬು ಫಸಲನ್ನು ಕಟಾವು ಮಾಡಿದ 15 ದಿನದೊಳಗಾಗಿ ಹಣ ಪಾವತಿಸುವಂತೆ ಅನೇಕ ಬಾರಿ ಮನವಿ ಮಾಡಿದ್ದೇವೆ. ರೈತರ ತಲಾ 2 ರಿಂದ 8 ಲಕ್ಷ ರೂ.ವರೆಗೆ ಪಾವತಿ ಬಾಕಿ ಇದೆ. ನಮ್ಮ ಹಣ ನೀಡುವವರೆಗೂ ನಾವು ಕಾರ್ಖಾನೆ ಆರಂಭಿಸಲು ಬಿಡುವುದಿಲ್ಲ ಎಂದು ಹೇಳಿದರು.
ಕಾರ್ಖಾನೆ ಮತ್ತು ಅಧಿಕಾರಿಗಳ ಸಭೆಯಲ್ಲಿ ರೈತರಿಗೆ ಹಣ ವಿತರಿಸುವಂತೆ ಸೂಚನೆ ನೀಡಿದ್ದರೂ ಕಾರ್ಖಾನೆ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ಇದರಿಂದ ನಾವು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮ್ಮ ಜಮೀನುಗಳಲ್ಲಿ ಉಳುಮೆ ಮಾಡಲು ಹಣ ಇಲ್ಲ. ನಾವು ಬೇರೆ ಕಡೆ ಬಡ್ಡಿಗೆ ಹಣ ತಂದು ಕೃಷಿ ಮಾಡಿದ್ದೇವೆ. ಆದರೆ, ಕಾರ್ಖಾನೆಯವರು ನಮ್ಮ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.