ಮಹಾಜನದಹಳ್ಳಿಯಲ್ಲೊಬ್ಬ ನೂರು ಮರಗಳ ತಂದೆ

Huvinahadagali parisara premi
ಮಹಾಜನದಹಳ್ಳಿ ಬೀರಲಿಂಗೇಶ್ವರ ದೇವಸ್ಥಾನ ಬಳಿ ಬೆಳೆಸಿರುವ ಗಿಡ-ಮರಗಳಿಗೆ ಬೀರಪ್ಪ ನೀರು ತಂದು ಹಾಕುತ್ತಿರುವುದು.
Published on

ಹೂವಿನಹಡಗಲಿ: ಮಕ್ಕಳಾಗದ ನೋವು ಮರೆಯಲು ತಾಲೂಕಿನ ಮಹಾಜನದಹಳ್ಳಿಯ ಕೂಲಿ ಕಾರ್ಮಿಕನೊಬ್ಬ ನೂರಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ನಿತ್ಯ ಪೋಷಣೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಗ್ರಾಮದ ಬೀರಪ್ಪ ಮಾಳಮ್ಮನವರ ದಂಪತಿಗೆ ಮದುವೆಯಾಗಿ 21 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಅನೇಕ ದೇವರುಗಳಿಗೆ ಹರಕೆ ಹೊತ್ತು, ಎಲ್ಲ ರೀತಿಯ ಚಿಕಿತ್ಸೆ ಪಡೆದರೂ ಫಲಸಿಗಲಿಲ್ಲ. ಊರಿನ ಬಹುತೇಕ ಜನರು ನಿತ್ಯ ಕೂಲಿ ಕೆಲಸಕ್ಕೆ ಹೋಗಿ ಬರುವ ಸಂದರ್ಭದಲ್ಲಿ ಬೀರಲಿಂಗೇಶ್ವರ ದೇವಸ್ಥಾನ ಬಳಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಬೀರಪ್ಪ ಮಾಳಮ್ಮನವರ, ದೇವಸ್ಥಾನದ ಸುತ್ತಲಿನಲ್ಲಿರುವ ಜಮೀನಿನಲ್ಲಿ ಅರಳಿ, ನೇರಳೆ, ತೇಗ, ಆಲದ ಸಸಿ ಸೇರಿ ವಿವಿಧ ಹಣ್ಣಿನ ಸಸಿಗಳನ್ನು ತಂದು ನೆಡುವ ಮೂಲಕ ನಿತ್ಯ ನೀರುಣಿಸಿ ಬೆಳೆಸಿದ್ದು, ಊರಿನ ಜನರಿಗೆ ನೆರಳಿನೊಂದಿಗೆ ತಂಪು ಗಾಳಿ ನೀಡುತ್ತಿವೆ.

ಬೆಳಗ್ಗೆ ಕೂಲಿ ಕೆಲಸಕ್ಕೆ ತೆರಳಿ ಬಂದ ಹಣದಿಂದಲೇ ಗಿಡಗಳನ್ನು ಆರೈಕೆ ಮಾಡುತ್ತಿದ್ದಾರೆ. ಬೇಸಿಗೆ ಸಂದರ್ಭದಲ್ಲಿ ನೀರಿನ ಅಭಾವ ಉಂಟಾದಾಗ ದೂರದ ಜಮೀನುಗಳಿಂದ ಹೊತ್ತುತಂದು ಗಿಡಗಳಿಗೆ ನೀರುಣಿಸಿದ್ದಾರೆ. ಕೇವಲ 3ನೇ ತರಗತಿವರೆಗೆ ಕಲಿತ ಬೀರಪ್ಪ ಮಾಳಮ್ಮನವರ ಮನೆಯ ಬಡತನದ ಕಾರಣ ವಿದ್ಯಾಭ್ಯಾಸವನ್ನು ಮುಂದುವರಿಸಿಲ್ಲ.

ನಿತ್ಯ ಕುಟುಂಬದವರೊಂದಿಗೆ ಕೂಲಿ ಕೆಲಸಕ್ಕೆ ಹೋಗಿ ಪ್ರಕೃತಿಯೊಂದಿಗೆ ಒಡನಾಟವನ್ನು ಹೊಂದಿದ ಬೀರಪ್ಪ, ದೇವಸ್ಥಾನದ ಸುತ್ತಲಿರುವ ಖಾಲಿ ಜಮೀನಿನಲ್ಲಿ ನೂರಾರು ಗಿಡಗಳನ್ನು ಬೆಳೆಸಿ ಕಳೆದ 4 ವರ್ಷಗಳಿಂದ ಪೋಷಣೆ ಮಾಡುವ ಮೂಲಕ ನಿಜವಾದ ಪರಿಸರ ಪ್ರೇಮಿಯಾಗಿದ್ದಾರೆ. ಬೀರಪ್ಪ ಅವರ ಕಾರ್ಯಕ್ಕೆ ಪತ್ನಿ ಸಹ ಕೈಜೋಡಿಸಿದ್ದಾರೆ. ಮರಗಳನ್ನು ಮಕ್ಕಳಂತೆ ಪೋಷಿಸುತ್ತಿರುವ ಕಾರಣಕ್ಕೆ ಗ್ರಾಮದಲ್ಲಿ ಬೀರಪ್ಪ ನೂರು ಮರಗಳ ತಂದೆ ಬೀರಣ್ಣ ಎಂದೇ ಪ್ರಸಿದ್ಧಿಯಾಗಿದ್ದಾರೆ.

ಮದುವೆಯಾಗಿ 21 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ನಿತ್ಯ ದೇವಸ್ಥಾನದ ಬಳಿ ಬಂದು ಕೂರುತ್ತಿದ್ದೆ. ಖಾಲಿ ಇರುವ ಸ್ಥಳಗಳಲ್ಲಿ ಗಿಡ ನೆಟ್ಟು ಬೆಳೆಸಿದೆ. ಇದು ಮಕ್ಕಳಿಲ್ಲ ಎಂಬ ಕೊರಗನ್ನು ದೂರ ಮಾಡಿದೆ. ಗಿಡಗಳ ಪೋಷಣೆಗೆ ಹೆಂಡತಿ ಬಸಮ್ಮ ಸಹ ಕೈಜೋಡಿಸಿದ್ದಾಳೆ. ಇತ್ತೀಚಿನ ಜನರಿಗೆ ಪರಿಸರದ ಬಗ್ಗೆ ಕಾಳಜಿ ಇಲ್ಲದಿರುವುದು ಬೇಸರದ ಸಂಗತಿ. ಗಿಡ, ಮರಗಳನ್ನು ಬೆಳೆಸಿದರೆ ನಾವೆಲ್ಲ ಸುಖವಾಗಿರಬಹುದು.| ಬೀರಪ್ಪ ಮಾಳಮ್ಮನವರ ಪರಿಸರ ಪ್ರೇಮಿ, ಮಹಾಜನದಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net