ನಾಳೆಯಿಂದ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆ: ಹೊರಗಿನವರಿಗೆ ನೋ ಎಂಟ್ರಿ

Hadagali Mailara Jatre Prepation
ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಹರಪನಹಳ್ಳಿ ಸಹಾಯಕ ಆಯುಕ್ತ ಚಂದ್ರಶೇಖರಯ್ಯ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
Published on

ಹೂವಿನಹಡಗಲಿ: ಫೆ.19ರಿಂದ ಮಾ.2ರವರೆಗೆ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆ ನಡೆಯಲಿದ್ದು, ತಾಲೂಕಿನ ಸುಕ್ಷೇತ್ರ ಮೈಲಾರಕ್ಕೆ ಹರಪನಹಳ್ಳಿ ಸಹಾಯಕ ಆಯುಕ್ತ ಚಂದ್ರಶೇಖರಯ್ಯ ಬುಧವಾರ ಭೇಟಿ ನೀಡಿ, ಜಾತ್ರೆ ಸರಳ ಆಚರಣೆಗೆ ಕೈಗೊಂಡಿರುವ ಸಿದ್ಧತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕರೊನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರಳವಾಗಿ ಆಚರಣೆ ಹಾಗೂ ಹೊರಗಿನ ಭಕ್ತರಿಗೆ ಪ್ರವೇಶ ನಿಷೇಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ. ಎಲ್ಲರೂ ಆದೇಶ ಪಾಲಿಸುವ ಮೂಲಕ ಕರೊನಾ ನಿಯಂತ್ರಿಸಲು ಕೈಜೋಡಿಸಬೇಕು. ಪ್ರತಿವರ್ಷ ರಾಜ್ಯ ಹಾಗೂ ಅಂತಾರಾಜ್ಯಗಳಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದರು. ಆದರೆ, ಈ ಬಾರಿ ಗ್ರಾಮಸ್ಥರಿಗೆ ಸೀಮಿತಗೊಳಿಸಲಾಗಿದೆ. ಈ ಕುರಿತು ಬ್ಯಾನರ್ ಹಾಗೂ ಬಸ್‌ಗಳ ಮೇಲೆ ದೊಡ್ಡ ಪೋಸ್ಟರ್ ಅಂಟಿಸುವ ಮೂಲಕ ಜನರಿಗೆ ಜಾಗೃತಿ ಮೂಡಿಸಬೇಕು. ಮಾಧ್ಯಮ ಪ್ರತಿನಿಧಿಗಳಿಗೆ ವಿಶೇಷ ಪಾಸ್ ವ್ಯವಸ್ಥೆ ಮಾಡುವಂತೆ ದೇವಸ್ಥಾನದ ಅಧಿಕಾರಿಗಳಿಗೆ ಎಸಿ ಚಂದ್ರಶೇಖರಯ್ಯ ಸೂಚಿಸಿದರು.

ಗ್ರಾಪಂ ಅಧಿಕಾರಿಗಳು ಕುಡಿವ ನೀರು, ಆರೋಗ್ಯ ಶಿಬಿರ ಹಾಗೂ ಬೀದಿ ದೀಪದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ದೇವಸ್ಥಾನದ ಆವರಣ ಮತ್ತು ಜಾತ್ರೆ ನಡೆಯುವ ಸ್ಥಳದಲ್ಲಿ ಕಸದ ಬುಟ್ಟಿಗಳನ್ನು ಇಡುವ ಮೂಲಕ ಸ್ವಚ್ಛತೆ ಕಾಪಾಡಬೇಕು. ಜಾತ್ರೆಗೆ ಆಗಮಿಸುವ ಅಧಿಕಾರಿಗಳಿಗೆ ಮಾಸ್ಕ್ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡುವಂತೆ ಎಸಿ ತಿಳಿಸಿದರು.

ಇದೇ ವೇಲೆ ಗ್ರಾಮದ ಮುಖಂಡ ಮಾಲತೇಶ ಮಡಿವಾಳ ಮಾತನಾಡಿ, ಚಂದನವಾಹಿನಿಯಲ್ಲಿ ಕಾರ್ಣಿಕದ ನೇರ ಪ್ರಸಾರ ಮಾಡುವ ಮೂಲಕ ಭಕ್ತರ ಬರುವಿಕೆ ತಡೆಯಬಹುದು ಎಂದು ಸಲಹೆ ನೀಡಿದರು. ಸಿಪಿಐ ರಾಮರೆಡ್ಡಿ ಮಾತನಾಡಿ, ಜಾತ್ರೆಗೆ ಹೊರ ಭಾಗದ ಭಕ್ತರು ಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಭದ್ರತೆ ಹಾಗೂ ಮೈಲಾರ, ಡೆಂಕನಮರಡಿಗೆ ಸಂಪರ್ಕ ಕಲ್ಪಿಸುವ ಎಲ್ಲ ಕೂಡು ರಸ್ತೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗುವುದು ಎಂದರು.ಡಿವೈಎಸ್ಪಿ ಹಾಲಮೂರ್ತಿರಾವ್, ಹೂವಿನಹಡಗಲಿ ಪಿಎಸ್‌ಐ ಎಸ್.ಪಿ.ನಾಯ್ಕ, ಗ್ರಾಪಂ ಅಧ್ಯಕ್ಷ ಭರಮಪ್ಪ ಇಟಿಗಿ, ಪಿಡಿಒ ನಿಂಗಪ್ಪ, ಗುತ್ತೆಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net