

ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಶುಕ್ರವಾರ ಗೋಧೂಳಿ ಮೂಹೂರ್ತದಲ್ಲಿ ಶ್ರೀ ಮೈಲಾರಲಿಂಗೇಶ್ವರ ಹಾಗೂ ಗಂಗಿಮಾಳಮ್ಮ ದೇವಿಯ ಕಲ್ಯಾಣೋತ್ಸವ ನಡೆಯಲಿದೆ.
ಕಲ್ಯಾಣೋತ್ಸವ ಅಂಗವಾಗಿ ಬುಧವಾರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಪ್ರತಿಷ್ಠಾಪಿಸಿ ವಿವಿಧ ಮಂಗಳ ವಾದ್ಯಗಳ ಮೂಲಕ ತುಂಗಭದ್ರಾ ನದಿಗೆ ತೆರಳಿ ಗಂಗಾಸ್ನಾನ ಮಾಡಿಸಲಾಯಿತು. ನಂತರ ದೇವಸ್ಥಾನದಲ್ಲಿ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು.
ಗುರುವಾರ ಶ್ರೀಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸೋಮವಾರ ಸ್ವಾಮಿಯ ತೇರಿಗೆ ಪೂಜೆ ಸಲ್ಲಿಸಿದ ಬಳಿಕ ರಾತ್ರಿ 9 ಗಂಟೆಗೆ ಸ್ವಾಮಿಯ ರಥೋತ್ಸವ ಜರುಗಲಿದೆ. ಮೇ 13 ರಂದು ಸಂಜೆ ಸ್ವಾಮಿಯ ಶಸ್ತ್ರ ಹಾಗೂ ಸರಪಳಿ ಪವಾಡ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಯ ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹರಿಕೆ ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಪ್ರಮೋದ್ ಭಟ್ ಅವರು ಪೂಜಾ ಕೈಂಕರ್ಯ ನೆರವೇರಿಸಿದರು.